ಜನ್ಮ ದಿನಾಚರಣೆಯ ದಿನ ‘ರಾಷ್ಟ್ರೀಯ ಯುವದಿನ’ ಎಂದು ಹೇಳಿ ಕಾರ್ಯಕ್ರಮ ಮಾಡುವಾಗ ನಮಗೆ ಆ ಪುಣ್ಯಾತ್ಮನ ನೆನಪಾಗುತ್ತದೆ. ಮರುದಿನವೇ ಅವರನ್ನು ಮರೆತು ನಾವುಗಳು ನಮ್ಮ ಪಾಡಿಗೆ ಉಳಿದು ಬಿಡುತ್ತೇವೆ. ಹೀಗಾಗಿ ಎಷ್ಟೋ ಬಾರಿ ನನಗೆ ನಾನೇ ಪ್ರಶ್ನೆ ಮಾಡಿಕೊಂಡು ಉತ್ತರ ಪಡೆದುಕೊಳ್ಳುವುದಕ್ಕೆಂದು ಹೆಣಗಾಡಿ ಸುಮ್ಮನಾಗಿದ್ದೇನೆ. ಈ ಮಹಾತ್ಮರನ್ನು ಹಾಗೂ ಅವರು ನಮಗಾಗಿ ನೀಡಿದ ವಿಚಾರಗಳನ್ನು ಕೇವಲ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಮಾತ್ರ ನೆನಪು ಮಾಡಿಕೊಳ್ಳುವುದೇಕೆ? ಪ್ರತಿ ಕ್ಷಣದಲ್ಲೂ ಬದುಕು ಬದಲಿಸಬಲ್ಲ ಅವರ ವಿಚಾರಗಳನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡುವುದೇಕೆ? ಇದರಿಂದ ನಾವು ಮಾಡಿದ್ದಾದರೂ ಏನು? ಹೀಗೆ ಹತ್ತಾರು ವಿಚಾರಗಳನ್ನು ಹಲವಾರು ಬಾರಿ ಪ್ರಶ್ನೆಗಳ ರೂಪದಲ್ಲಿ ಆಲೋಚನೆ ಮಾಡಿ ಉತ್ತರ ಸಿಗದೇ ತತ್ತರಿಸಿ ಹೋಗಿದ್ದೇನೆ. ಆದರೆ ಇಂದು ನನಗ್ಯಾಕೋ ಆ ವ್ಯಕ್ತಿಯ ಕುರಿತು ಬರೆಯಬೇಕು ಅವರ ವಿಚಾರಗಳ ಹರಿವನ್ನು ಮೆಲ್ಲನೆ ನಮ್ಮ ಯು ಮನಗಳ ಎದೆಯಲ್ಲಿ ಹರಿಸಬೇಕು ಎಂದು ಈ ಲೇಖನ ಬರೆಯಲು ಶುರುವಿಟ್ಟುಕೊಂಡಿದ್ದೇನೆ. ಒಂದು ದಿನಕ್ಕಾಗಿ ಮಾತ್ರ ನಾವು ಅವರನ್ನು ನೆನಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಪ್ರತಿದಿನವು ಅವರನ್ನು ನೆನಸಿಕೊಳ್ಳಬೇಕು. ಅವರನ್ನು ನೆನೆದಾಗಲೊಮ್ಮೆ ನಮ್ಮ ಹೃದಯ ತುಂಬಿ ಬರಬೇಕು. ಆತ್ಮವಿಶ್ವಾಸ ಪುಟಿದೇಳಬೇಕು. ಅದಕ್ಕಾಗಿ ನಾನಿಂದು ಬರೆಯುತ್ತಿದ್ದೇನೆ.
ನನಗ್ಯಾಕೋ ಇಂದು ಆ ಮಹಾತ್ಮ ಬರೆದ ಸಾಲುಗಳು ಬೆಂಬಡದೆ ಕಾಡುತ್ತಿವೆ. ಈ ಮಣ್ಣಿನ ಕಣ ಕಣದ ಮೇಲಿನ ಪ್ರೇಮ ನೂರ್ಮಡಿಗೊಳ್ಳುತ್ತಿದೆ. ಓದುವಾಗ ಬರಿ ಅಕ್ಷರಗಳ ಸಾಲಿನಂತೆ ಕಂಡರು ಅದರಲ್ಲಿಳಿದು ನೋಡಿದರೆ ಇಡೀ ಭ್ರಹ್ಮಾಂಡವೆ ತೆರೆದುಕೊಳ್ಳುತ್ತದೆ. ನನ್ನ ದೇಶದ ಆಧ್ಯಾತ್ಮ, ನನ್ನ ದೇಶದ ಸಂಸ್ಕೃತಿ, ನನ್ನ ದೇಶದ ಭವ್ಯ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿ ಆ ಸಾಲುಗಳು ಗುರುತಿಸುತ್ತವೆ. ಅಭಿಜಾತ ಕವಿ ಹಾಗೂ ಆಧುನಿಕ ಅಜಾತಶತ್ರು ಅಟಲ್‌ಬಿಹಾರಿ ವಾಜಪೇಯಿ ಬರೆದ ಈ ಕವಿತೆಯನ್ನು ಓದುತ್ತಿದ್ದರೆ ಹೃದಯಾಂತರಾಳದಲ್ಲುಳಿದ ದೇಶಭಕ್ತಿಯ ಸೆಲೆ ಒಮ್ಮಲೆ ಪುಟಿಯುತ್ತದೆ. ನೋಡು ನೋಡುತ್ತಲೇ ಎದೆತುಂಬಿ ಬಂದು ಕಣ್ಣ ಹನಿಯಾಗಿ ಜಾರಿ ಭಾವ ಸಂಗಮದಲ್ಲಿ ಲೀನವಾಗುತ್ತದೆ.
“ಭಾರತ ಜಮೀನ ಕಾ ತುಕ್ಡಾ ನಹೀಂ
ಜೀತಾ ಜಾಗ್ ತಾ ರಾಷ್ಟ್ರ ಪುರುಷ್ ಹೈ
ಯೇ ವಂದನ್ ಕಿ ಭೂಮಿ ಹೈ
ಯೇ ಅಭಿನಂದನ್ ಕಿ ಭೂಮಿ ಹೈ
ಯೇ ತರ್ಣ ಕಿ ಭೂಮಿ ಹೈ
ಯೇ ಅರ್ಣ ಕಿ ಭೂಮಿ ಹೈ
ಇಸ್ ಕಾ ಕಂಕರ ಕಂಕರ ಶಂಕರ ಹೈ
ಇಸ್ ಕಾ ಬಿಂದು ಬಿಂದು ಗಂಗಾ ಹೈ
ಹಮ್ ಜೀಯೇಂಗೆತೋ ಇಸ್ ಕೇ ಲಿಯೇ
ಹಮ್ ಮರೇಂಗೆತೋ ಇಸ್ ಕೆ ಲಿಯೇ”
“ಭಾರತ ಕೇವಲ ಒಂದು ಜಮೀನಿನ ತುಂಡಲ್ಲ, ಅದು ಗೆಲ್ಲುತ್ತ, ಎಚ್ಚರದಿಂದಿರುವ ರಾಷ್ಟ್ರ ಪುರುಷ. ಅದು ವಂದಿಸುವ ಭೂಮಿ, ಅಭಿನಂದಿಸುವ ಭೂಮಿ. ಅದು ತರ್ಣದ ಭೂಮಿ, ಅದು ಅರೆ್ಣಯ ಭೂಮಿ. ಇದರ ಕಣ ಕಣದಲ್ಲೂ ಶಂಕರನಿದ್ದಾನೆ. ಇದರ ಹನಿ ಹನಿಯಲ್ಲೂ ಗಂಗಾಜಲವಿದೆ. ನಾವು ಬದುಕುವುದಾದರೆ ಭಾರತಕ್ಕಾಗಿ, ನಾವು ಸಾಯುವುದಾದರೂ ಭಾರತಕ್ಕಾಗಿ” ಈ ಕವಿತೆಯನ್ನು ವಾಜಪೇಯಿ ರಚಿಸಿ, ಅದರ ಅರ್ಥವನ್ನು ಸಾರಿ ಸಾರಿ ಜಗತ್ತಿಗೆ ತಿಳಿಸಿದರು. ಆದರೆ ಆ ಪುರುಷಸಿಂಹ ಅಂದೇ ಇದನ್ನು ಹೇಳಿದ್ದ. ಹೇಳಿದಂತೆಯೇ ಬಾಳಿದ್ದ. ತನ್ನ ಜೀವನದುದ್ದಕ್ಕೂ ತಾನೇ ಭಾರತವಾಗಿ ಜಗತ್ತಿನಾಧ್ಯಂತ ಸಂಚರಿಸಿದ್ದ. ಸನಾತನ ಸಂಸ್ಕೃತಿಯ ಶಿಶುವಾಗಿ ಬದುಕಿ ತೋರಿಸಿದ್ದ. ತನ್ನ ಜೀವದ ಕಣ ಕಣದಲ್ಲು ಭಾರತವನ್ನು ತುಂಬಿಕೊಂಡು ಭಾರತಾಂಬೆಯ ಮಾತೃ ಸಾಗರದಲ್ಲಿ ಲೀನವಾಗಿ ಹೋಗಿದ್ದ. ಇಡೀ ಜಗತ್ತನ್ನೇ ಅಲ್ಲಾಡಿಸುವ ಧಿರವಾಣಿಯ ಮೂಲಕ ಭಾರತದ ಪರಂಪರೆಯ ಸಾರವನ್ನು, ಆಧ್ಯಾತ್ಮದ ಅಭಿಸಾರವನ್ನು ವಿಶ್ವಕ್ಕೆ ಹಂಚಿ ಇಡೀ ಜಗತ್ತನ್ನೆ ಭಾರತಾಂಬೆ ಎದುರು ನತಮಸ್ಥಕವಾಗುವಂತೆ ಮಾಡಿದ್ದ. ಭಾರತ ಅದು ಕೇವಲ ದೇಶವಲ್ಲ ಅದೊಂದು ಬದುಕುವ ಕಲೆ, ಆಧ್ಯಾತ್ಮದ ಸೆಲೆ, ವಿಶ್ವಕ್ಕೆ ಭವಿಷ್ಯದ ನೆಲೆ ಎನ್ನುವುದನ್ನು ಎತ್ತಿ ತೋರಿಸಿದ್ದ. ಆ ಧೀರ ಪುರಷನೆ ಸ್ವಾಮಿ ವಿವೇಕಾನಂದ.
ಹೌದು ಇಂದು ಆ ಮಾಹಾ ಪುರಷನ ಜನ್ಮದಿನ. ಭಾರತದ ಆಧ್ಯಾತ್ಮವನ್ನು ಅಭಿವ್ಯಕ್ತಗೊಳಿಸಿ ಋಷಿಮುನಿಗಳು, ಸಾಧುಸಂತರು ಸಹಸ್ರವರ್ಷಗಳ ಕಾಲ ಸಂಗ್ರಹಿಸಿದ ಜ್ಞಾನವನ್ನು ಇಡೀ ವಿಶ್ವಕ್ಕೆ ಉಣಬಡಿಸಿ ಭಾರತದ ಕುರಿತು ಕೃತಾರ್ಥ ಭಾವ ಮೂಡುವಂತೆ ಮಾಡಿದ ಆ ಮಹಾತ್ಮ ಹುಟ್ಟಿದ ದಿನ. ಆ ವ್ಯಕ್ತಿಯ ಹೆಸರೆಂದರೆ ಅದು ಎಂದು ಮರೆಯದ ಇತಿಹಾಸ, ಯಾರು ನಿರ್ಮಿಸಲಾಗದ ಚರಿತ್ರೆ. ನರೇಂದ್ರನಿಂದ ವಿವೇಕಾನಂದನಾಗುವವರೆಗೂ ಆ ಪುರುಷ ಸಿಂಹನಿಟ್ಟ ಒಂದೊಂದುಹೆಜ್ಜೆಯು ಭಾರತದ ವೀರಗಾಥೆಯ ಸೃಷ್ಠಿ. ಕೋಲ್ಕತ್ತಾದಿಂದ ಹಿಡಿದು ಅಮೇರಿಕಾದ ಚಿಕ್ಯಾಗೋವರೆಗೂ ಆತ ಕೈಗೊಂಡ ಯಾತ್ರೆ ಅದೊಂದು ಆಧ್ಯಾತ್ಮ ಹಾಗೂ ಭಾರತೀಯರ ಸ್ವಾಭಿಮಾನದ ದಂಡಯಾತ್ರೆ. ಹೀಗೆ ಭಾರತದ ಚರಿತ್ರೆಯನ್ನು ಜಗತ್ತಿನ ಉದ್ದಗಲಕ್ಕೂ ಬಿತ್ತುತ್ತ ಅವಕಾಶ ಸಿಕ್ಕಕಡೆಯಲ್ಲೇಲ್ಲ ಭಾರತೀಯತೆಯನ್ನು ಮತ್ತಷ್ಟು ಮೇಲಕ್ಕೆತ್ತುತ್ತ ಸಾಗಿದ ಆ ಸಿಡಿಲ ಸನ್ಯಾಸಿಯನ್ನು ನಾವಿಂದು ನೆನೆಯಲೆ ಬೇಕು. ಕಾರಣ ಆ ಸಂತನ ಸಾಧನೆ ಸಾಮಾನ್ಯವಾದುದ್ದಲ್ಲ. ದಾಸ್ಯ ಮದಿರೆಯ ಕುಡಿದು ಗುಂಗಲ್ಲಿದ್ದ ನವಭಾರತದ ಯುವಪೀಳಿಗೆಯನ್ನು ಬಡಿದೆಚ್ಚರಿಸಿದ ವಿವೇಕಾನಂದ ಇಂದು ನಮಗೆಲ್ಲ ಆದರ್ಶದ ಪ್ರತೀಕ. ನಾವು ಅವರಂತಾಗದೆ ಇದ್ದರೂ ಸಹ ಕನಿಷ್ಠ ಅವರ ಬೋಧನೆಯನ್ನಾದರು ಓದಿ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಾವು ಸ್ವಾಮಿಜೀಯಂತ ಧಿರ ಯುಗಾಂತರದ ಸತ್ಯ ಸಂಭೂತರಾಗದಿದ್ದರೂ ಪರವಾಗಿಲ್ಲ. ಭರತ ಮಾತೆಯ ತಲೆಯ ಕಿರಿಟವಾಗದೆ ಇದ್ದರೂ ಕಾಲಿನ ಪಾದುಕೆಯಾದರೂ ಆಗಬಹುದು. ಸ್ವಾಮಿಜೀಯಂತ ನಿಷ್ಠ ದೇಶಭಕ್ತಿ ನಮ್ಮಲ್ಲಿ ಇಲ್ಲ ಆದ್ದರಿಂದ ನಾವು ಸಿಡಿಲ ಸನ್ಯಾಸಿ ಆಗುವುದು ಬೇಡ ಕೇವಲ ನಿಜವಾದ ಭಾರತೀಯನಾದರೂ ಸಾಕು.
ಅಂದು ಚಿಕ್ಯಾಗೋ ಧರ್ಮ ಸಮ್ಮೇಳನಕ್ಕೆ ಹೋಗುವಾಗ ಅವರಲ್ಲಿದ್ದುದು ಒಂದೇ ಗುರಿ. ನನ್ನ ದೇಶವನ್ನು ನಾನು ಪರಿಚಯಿಸಬೇಕು. ನನ್ನ ದೇಶದ ಇತಿಹಾಸವನ್ನು ಸಾರಿ ಸಾರಿ ಹೇಳಬೇಕು. ನನ್ನ ದೇಶದ ಪರಂಪರೆಯ ಅಮೃತವನ್ನು ಅವರಿಗೆ ಉಣಬಡಿಸಬೇಕು. ನನ್ನ ದೇಶದ ಸನಾತನ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಡಿಸಿ ವಿಶ್ವಕ್ಕೆ ತೋರಿಸಬೇಕು ಎನ್ನುವುದಾಗಿತ್ತು. ಅಮೇರಿಕಾ ದೇಶದಲ್ಲಿ ಕಾಲಿಡುತ್ತಿದ್ದಂತೆ ಆದ ಅವಮಾನಗಳು ಇವರ ಎದೆಯನ್ನೆನು ಘಾಸಿ ಮಾಡಲಿಲ್ಲ. ಇವರಲ್ಲಿನ ಆತ್ಮ ವಿಶ್ವಾಸವನ್ನು ಕುಂದಿಸುವುದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕಾಗಿಯೆ ಇಂದು ಈ ದಿಟ್ಟ ನಿಲುವಿನ, ಗಟ್ಟಿಗುಂಡಿಗೆಯ ಸಂತ ನಮ್ಮ ದೇಶದ ಆದರ್ಶವಾಗಿರುವುದು. ಆ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಯಾವುದಾದರು ಒಂದು ಪ್ರತಿಷ್ಠಿತ ಸಂಸ್ಥೆಯ ಪರಿಚಯ ಪತ್ರವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಇದನ್ನು ಅರಿಯದ ಸ್ವಾಮಿಜೀ ಬರಿಗೈಯಲ್ಲಿ ಅಮೇರಿಕಾದಲ್ಲಿ ಅಲೆಯುತ್ತಿದ್ದಾಗ ಪರಿಚಯ ಪತ್ರ ನೀಡಿದ ಅಮೇರಿಕಾದ ಆ ಪ್ರಾಧ್ಯಾಪಕನ ಮಾತು ಕೇಳಿದರೆ ಸ್ವಾಮೀಜಿಯವರ ವ್ಯಕ್ತಿತ್ವ ಹಾಗೂ ಅವರ ಪಾಂಡಿತ್ಯದ ಸತ್ವ ನಮಗೆ ಅರ್ಥವಾಗಿತ್ತದೆ. ಅಂದು ಹಾರ್ವರ್ಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆ.ಹೆಚ್.ರೈಟ್ ಇವರೊಂದಿಗೆ ಮಾತನಾಡುತ್ತಲೆ ಮೈಮರೆತು ಕಳೆದು ಹೋದ. ನಂತರ ಸ್ವಾಮಿಜಿಯವರನ್ನು ಕುರಿತು ನಿಮ್ಮನ್ನು ಪರಿಚಯಿಸುವುದಕ್ಕಾಗಿ ಪತ್ರ ಬರೆಯುವುದೆಂದರೆ ಅದು ಹುಚ್ಚುತನ ಎನ್ನಿಸಿಕೊಳ್ಳುತ್ತದೆ. ಕಾರಣ “ನಿತ್ಯ ಬೆಳಗುವ ಸೂರ್ಯನಿಗೆ ಯಾರ ಅಪ್ಪಣೆ ಬೇಕು? ನೀವೊಬ್ಬ ಸ್ವಂತಃ ಪ್ರಕಾಶಿಸುವ ಸೂರ್ಯ” ಎಂದು ಹೇಳುವಾಗ ಆ ವ್ಯಕ್ತಿಯ ಮುಖದಲ್ಲಿ ಅಗೋಚರ ಚೇತನವೊಂದು ಸುಳಿದಾಡಿದಂತಾಯಿತು. ತಾನು ನೀಡಬೇಕಿದ್ದ ಪರಿಚಯ ಪತ್ರದಲ್ಲಿ ಆತ ಬರೆದ ಸಾಲುಗಳು ಕೇವಲ ಸ್ವಾಮಿಜಿವರ ಕುರಿತಾಗಿದ್ದರು ಅದರ ಹಿನ್ನೆಲೆಯಲ್ಲಿ ಇಡೀ ಭಾರತವೇ ಪ್ರಕಾಶಿಸುತ್ತಿತ್ತು. ಆ ಪತ್ರದಲ್ಲಿ ನಮೂದಿಸಿದ ಆ ಸಾಲುಗಳು ಇಂದಿನ ಯುವಪೀಳಿಗೆಗೆ ಆದರ್ಶದ ವ್ಯಾಖ್ಯಗಳೆಂದರೂ ತಪ್ಪಿಲ್ಲ. “ಊಜಡಿಜ ಟಚಿಟಿ ತಿಠ ಟಠಜ ಟಿಣಜಟಟರಜಟಿಣ ಣಚಿಟಿ ಚಿಟಟ ಟಿಣಜಟಟರಜಟಿಣ ಠಿಜಠಟಜ ಠ ಂಟಜಡಿಛಿಚಿ ಠಿಣಣ ಣಠಜಣಜಡಿ” “ಇಲ್ಲಿ ಒಬ್ಬ ವ್ಯಕ್ತಿ ಇದ್ದಾನೆ. ಅಮೇರಿಕಾ ದೇಶದ ಎಲ್ಲಾ ಬುದ್ದಿವಂತರ ಬುದ್ದಿಯನ್ನು ಒಟ್ಟು ಸೇರಿಸಿದರೂ ಈತನ ಬುದ್ದಿಶಕ್ತಿಗೆ ಸರಿಸಾಟಿಯಾಗದು ಅಂತಹ ವ್ಯಕ್ತಿಯನ್ನು ಕಳುಹಿಸುತ್ತಿದ್ದೇನೆ ಅವರಿಗೆ ಮಾತಾಡಲು ಅವಕಾಶ ಕೊಡಿ” ಎಂದು ಬರೆಯುತ್ತಾನೆಂದರೆ ನಮ್ಮ ದೇಶದ ಒಬ್ಬ ಸಂತನ ಜ್ಞಾನದ ವ್ಯಾಪ್ತಿ ಯಾವ ಮಟ್ಟದಲ್ಲಿರಬೇಕು ನೀವೇ ಹೇಳಿ. ಅಮೇರಿಕಾದಲ್ಲಿ ಮಾತು ಆರಂಭಿಸಿದ ಸ್ವಾಮಿಜಿಯವರ ಅಂತಿಮ ಮಾತುಗಳು ನಿಂತಿದ್ದು ಜೀವನದ ಕಡೆಯ ಕ್ಷಣದಲ್ಲಿಯೇ. ಅಲ್ಲಿಯವರೆಗೂ ಅವರು ಹೇಳಿದ್ದು ಒಂದೇ ಮಂತ್ರ “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಎಲ್ಲಿಯೂ ನಿಲ್ಲದಿರಿ” ನನ್ನ ಭಾರತ, ನನ್ನ ಯುವ ಶಕ್ತಿ ಎನ್ನುತ್ತಲೇ ದೇಹತ್ಯಜಿಸಿದರೂ ಆ ಚೇತನ ಇಂದು ತನ್ನ ಬೋಧನೆಯ ಮೂಲಕ ಚಿರವಾಗಿಯೆ ಇದೆ.
ಆ ವ್ಯಕ್ತಿಯ ವ್ಯಕ್ತಿತ್ವದ ಕಣ ಕಣವನ್ನು ಒರೆಗೆ ಹಚ್ಚಿ ನೋಡಿದರೆ ಪ್ರತಿಕಣದಲ್ಲೂ ಕಾಣುವುದು ಬರೀ ದೇಶಾಭಿಮಾನ. ಅದರ ಹೊರತು ಅನ್ಯ ಮಾತೆ ಇಲ್ಲ. ಅದಕ್ಕೆ ಸಾಕ್ಷಿ ಒದಗಿಸುವುದು ಅವರ ಮಾತುಗಳು 1897 ಜನೇವರಿ 15 ರಂದು ವಿಶ್ವ ಸಂಚಾರ ಮಾಡಿ ಭಾರತಕ್ಕೆ ವಾಪಸ್ಸಾದ ಸ್ವಾಮಿಜಿಯನ್ನು ಕುರಿತು “ನೀವು ಇಷ್ಟು ದಿವಸ ಭೋಗ ಜೀವನವನ್ನು ಕಂಡು ಬಂದಿದ್ದೀರಿ, ಆದರೆ ಈಗ ಭಾರತಕ್ಕೆ ಬರುವಾಗ ಭಾರತದ ಕುರಿತು ನಿಮ್ಮ ನಿಲುವೇನು” ಎಂದು ಕೇಳುತ್ತಲೆ ಅವರ ಕೊರಳು ಬಿಗಿದು ಹೊರಬಂದ ಕೆಂಡದ ಧ್ವನಿಯಲ್ಲಿ “ನಾನು ಭಾರತವನ್ನು ಬಿಡುವಾಗ ನಾನು ಭಾರತವನ್ನು ಪ್ರೀತಿಸುತ್ತಿದ್ದೆ. ಆದರೆ ಈಗ ಅದರ ಒಂದೊಂದು ಧೂಳಿನ ಕಣಕಣವು ನನಗೆ ಪವಿತ್ರವಾಗಿ ಕಾಣುತ್ತಿದೆ” ಎನ್ನುವ ಮಾತಿನಲ್ಲಿ ಅದೆಂತಹ ದೇಶಾಭಿಮಾನ ತುಂಬಿರಬಾರದು ನೀವೇ ಊಹಿಸಿ ನೋಡಿ. ಭಾರತದ ಸಮುದ್ರ ದಡಕ್ಕೆ ಹಡಗು ಬರುತ್ತಲೇ ಅಲ್ಲಿದ್ದ ಮರುಳನ್ನು ಮೈಮೇಲೆ ಸುರಿದುಕೊಂಡು ಮರಳಿನಲ್ಲಿಯೇ ಸ್ನಾನ ಮಾಡಿ “ಇಷ್ಟುವರ್ಷದ ಭೋಗ ಜೀವನದ ಪಾಪದ ಕಣವೇನಾದರೂ ನನ್ನನ್ನು ಸೋಕಿದ್ದರೆ ಅದು ನನ್ನ ದೇಶದ ಮರಳಿನಲ್ಲಿ ಮಣ್ಣಾಗಲಿ” ಎಂದು ಹೇಳುವಾಗ ಅವರಲ್ಲಿನ ಅಪ್ರತಿಮ ದೇಶಭಕ್ತಿಗೆ ಎಂಥವರಾದರೂ ಹಣೆಮಣಿಯಲೇ ಬೇಕು. ಆ ವ್ಯಕ್ತಿಯ ನಿಲುವೆ ಹಾಗಿತ್ತು. ಅವರನ್ನು ನೋಡಿದರೆ ಅಕ್ಷರಶಃ ಸಿಂಹವನ್ನೆ ಕಂಡಂತಾಗುತ್ತಿತ್ತು. ಆ ತ್ಯಾಗದ ಪ್ರತೀಕವಾದ ಉಡುಗೆ, ಗಾಂಭಿರ್ಯ ತುಂಬಿದ ನಡಿಗೆ, ಚಾತುರ್ಯ ತುಂಬಿದ ವಾಕ್ಝರಿಗೆ ಸೋಲದ ಹೃದಯವೇ ಇರಲಿಲ್ಲ. ಹೀಗಾಗಿಯೆ ಅವರು ಇಡೀ ವಿಶ್ವವನ್ನು ಆಧ್ಯಾತ್ಮದ ಬಾಣದಲ್ಲಿ ಧೂಳೆಬ್ಬಿಸಿದರು.
ಅಂದು ಮಹಾನ್ ಮಹಾನ್ ಮೇಧಾವಿಗಳೆಲ್ಲ ಮಾನಸಿಕ ಗುಲಾಮಗಿರಿಗೆ ಶರಣಾಗಿದ್ದ ದುರ್ದೈವದ ಸ್ಥಿತಿಯನ್ನು ಕಂಡಾಗ ಸ್ವಾಮೀಜಿ ಕಂಗಾಲಾಗಿ ಹೋಗುತ್ತಿದ್ದರು. ಸಮುದ್ರವನ್ನು ಈಜಿಕೊಂಡು ಕನ್ಯಾಕುಮಾರಿಯ ಕಲ್ಲುಬಂಡೆಯ ಮೇಲೆ ನಿಂತುಕೊಂಡು ಭವ್ಯ ಭಾರತ ನಿರ್ಮಾಣದ ಕನಸ್ಸು ಕಾಣುತ್ತಿದ್ದರು. ಮನದಲ್ಲಿ ಮುಕ್ತಿ ಪಡೆಯುವ ವಿಚಾರವಿಲ್ಲ. ತುತ್ತು ಅನ್ನ ಕೈಯಲ್ಲಿ ಹಿಡಿದು ತಿನ್ನಬೇಕೆಂದರು ದೇಶದ ದೀನ ದುಃಖಿತ ಬಂಧುಗಳ ಸೊರಗಿದ ಮುಖಗಳೆ, ಹಾಗೂ ದೈನೇಶಿ ಸ್ಥಿತಿಯ ಕಣ್ಣುಗಳೆ ವಿವೇಕಾನಂದರ ಮುಂದೆ ಸುಳಿಯುತ್ತಿದ್ದವು. ಕಷ್ಟಪಟ್ಟು ತಡೆ ಹಿಡಿದ ದುಃಖ ಉಮ್ಮಳಿಸಿ ಬಂದು ಬಿಡುತ್ತಿತ್ತು. ನಮ್ಮ ದೇಶವು ಒಂದು ಕಾಲದಲ್ಲಿ ಸಂಪತ್ ಭರಿತವಾಗಿತ್ತು ಅತ್ಯಂತ ಮೇಧಾವಿಗಳಿದ್ದಂತ ದೇಶ ನನ್ನದಾಗಿತ್ತು. ನೂರಾರು ಋಷಿಮುನಿಗಳು ತಪಸ್ಸುಗೈದ ಪುಣ್ಯದ ನೆಲವಾಗಿತ್ತು. ಆದರೆ ಇಂದು ಆ ದೇಶ ಎಲ್ಲಿ ಹೋಯಿತು. ಅಂತಹ ಜ್ಞಾನ, ಸಂಪತ್ತು ಏಕೆ ನಷ್ಟವಾಯಿತು? ಇಂಥಹ ಧರ್ಮ ಭೂಮಿಯಲ್ಲಿ ಅದೆಷ್ಟು ಜನ ಉಪವಾಸ ನರಳುತ್ತಿದ್ದಾರೆ, ಅದೇಷ್ಟು ಜನರಿಗೆ ಮಾನ ಮುಚ್ಚಲು ಬಟ್ಟೆಯೇ ಇಲ್ಲ. ನಮ್ಮ ದೇಶವನ್ನು ಈ ಸ್ಥಿತಿಯಿಂದ ಪಾರು ಮಾಡುವ ಬಗೆಯಾದರೂ ಹೇಗೆ? ಎಂದು ಪ್ರತಿಕ್ಷಣ ಹಾತೊರೆಯುತ್ತಿದ್ದರು. ಈ ಹತಭಾಗ್ಯವನ್ನು ಹೇಳುತ್ತ “ಎಲ್ಲಿಯ ವರೆಗೂ ನನ್ನ ದೇಶದಲ್ಲಿ ಒಬ್ಬ ವ್ಯಕ್ತಿ ಉಪವಾಸದಿಂದ ಬಳಲುತ್ತಾ ಇರುತ್ತಾನೆ, ಎಲ್ಲಿಯವರೆಗೆ ಒಬ್ಬ ವ್ಯಕ್ತಿ ಅಜ್ಞಾನಿಯಾಗಿರುತ್ತಾನೆ ಅಲ್ಲಿಯವರೆಗೆ ನನಗೆ ಮೋಕ್ಷ ಬೇಕಿಲ್ಲ” ಎಂದು ದಿಗಂತಾಭಿಮುಖವಾಗುತ್ತಾರೆ. ಆದರೆ ನನಗನ್ನಿಸುತ್ತಿದೆ ಆ ಮಹಾತ್ಮನ ಆತ್ಮಕ್ಕೆ ಇನ್ನೂ ಮೋಕ್ಷ ಸಿಕ್ಕಿಲ್ಲ. ಕಾರಣ ಅವರಂದುಕೊಂಡ ಕನಸುಗಳು ಕೈಗೂಡುತ್ತಿಲ್ಲ. ಭಾರತ ವಿಶ್ವಗುರುವಾಗಿ ನಿಲ್ಲುತ್ತಿಲ್ಲ. ಯುವಶಕ್ತಿಯ ಬಲ ಸದ್ವಿನಿಯೋಗವಾಗುತ್ತಿಲ್ಲ. ಭಾರತ ಮಾತೆಯ ಬಳಲಿದ ಭಾಹುವಿಗೆ ಶಕ್ತಿ ಸಿಗುತ್ತಿಲ್ಲ. ಇನ್ನಾದರೂ ಯುವಶಕ್ತಿ ಎಚ್ಚೆತ್ತುಕೊಳ್ಳಬೇಕು. ಆ ಸಿಡಿಲ ಸಂತನ ವಿಚಾರ ಧಾರೆಗಳನ್ನು ಅಳವಡಿಸಿಕೊಂಡು ಭವ್ಯ ಭಾರತವನ್ನು ನಿರ್ಮಾಣ ಮಾಡಬೇಕು. ಅದಕ್ಕೆ ಹೇಳಿದ್ದು ಆ ಮಹಾತ್ಮನ ಹಾಗೆ ನಾವು ಮಾತೆಯ ಶಿರಕ್ಕೆ ಕಿರಿಟವಾಗದೆ ಇದ್ದರೂ ಪರವಾಗಿಲ್ಲ ಕನಿಷ್ಟ ಅವಳ ಪಾದಕ್ಕೆ ಪಾದುಕೆಯಾದರೂ ಆಗೋಣ.
- * * * -