ಬೆಂಗಳೂರು, ಫೆ 20 - ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಬೀದಿ ನಾಯಿಗಳಿಗೆ ರೇಬೀಸ್ ರೋಗದ ವಿರುದ್ಧ ಲಸಿಕೆ ಹಾಕಿರುವುದನ್ನು ಕಾಣುವಂತೆ ಮಾಡಲು ನಾಯಿಗಳ ಕಿವಿ ಅಂಚಿನಲ್ಲಿ ಇಂಗ್ಲಿಷ್ "ವಿ" ಆಕಾರದಲ್ಲಿ ಕತ್ತರಿಸಿದ ಗುರುತು ಶಾಶ್ವತವಾಗಿ ಇರುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಪರಿಷತ್ತಿಗಿಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯೆ ಡಾ.ಜಯಮಾಲ ನಿಯಮ 330ಎ ಅಡಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಬಿಬಿಎಂಪಿಯಿಂದ ಬೀದಿ ನಾಯಿಗಳಿಗೆ ರೇಬೀಸ್ ರೋಗದ ವಿರುದ್ಧ ಎಆರ್‌ವಿ ಲಸಿಕೆ ಹಾಕಿದ ನಂತರ ಆಯಿಲ್ ಪೇಂಟ್ ಅನ್ನು ಬಳಸು ಲಸಿಕೆ ಹಾಕಿದ ನಾಯಿಗಳನ್ನು ಗುರುತಿಸಲಾಗುತ್ತದೆ. ಆದರೆ ಈ ಬಣ್ಣ ಮೂರರಿಂದ ನಾಲ್ಕು ವಾರಗಳ ಅವಧಿಗೆ ಮಾತ್ರ ಬಾಳಿಕೆ ಬರುತ್ತಿದ್ದು, ತದನಂತರ ಬಿಸಿಲು ಮಳೆಗೆ ಅಳಿಸಿ ಹೋಗುತ್ತಿದೆ. ಇದಕ್ಕಾಗಿ ನಾಯಿಗಳ ಕಿವಿಗಳ ಅಂಚಿನಲ್ಲಿ ವಿ ಆಕಾರದಲ್ಲಿ ಕತ್ತರಿಸಿದ ಗುರುತು ಶಾಶ್ವತವಾಗಿ ಇರುವಂತೆ ನೋಡಿಕೊಳ್ಳಿ ಎಂದು ಸೂಚಿಸಲಾಗಿದೆ ಎಂದರು.
ಬಿಬಿಎಂಪಿಯಿಂದ ಹಾಲಿ ಇರುವ ಮೂಲಭೂತ ಸೌಕರ್ಯಗಳ ಎಬಿಸಿ-ಎಆರ್‌ವಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ ವಲಯಗಳಲ್ಲಿ 2020 ರ ಜನವರಿ ಅಂತ್ಯದವರೆಗೆ ಒಟ್ಟು 31820 ಬೀದಿ ನಾಯಿಗಳಿಗೆ ಎಬಿಸಿ-ಎಆರ್‌ವಿ ಹಾಗೂ 33033 ಬೀದಿ ನಾಯಿಗಳಿಗೆ ಎಆರ್‌ವಿ ಲಸಿಕೆ ಹಾಕಲಾಗಿದೆ. ಉಳಿದ ಬೀದಿನಾಯಿಗಳಿಗೆ ಲಸಿಕೆ ಹಾಕಿಸುವ ಕುರಿತು ಮಾಸ್ ರೇಬಿಸ್ ವ್ಯಾಕ್ಸಿನೇಷನ್ ಕಾರ್ಯಕ್ರಮ ರೂಪಿಸಲಾಗಿರುವುದಾಗಿ ತಿಳಿಸಿದರು.