ಬೆಂಗಳೂರು, ಡಿ.2 - ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಾಜ್ಯದಲ್ಲೂ ಮಹಿಳೆಯರ ಸುರಕ್ಷತೆಗೆ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.ದೌರ್ಜನ್ಯ, ಅತ್ಯಾಚಾರ ಯತ್ನ ಕೃತ್ಯಗಳಂತಹ ಪ್ರಯತ್ನಗಳು ನಡೆದಾಗ ಕೂಡಲೇ ಸ್ಥಳಕ್ಕೆ ಧಾವಿಸಿ, ಸಂತ್ರಸ್ತ ಮಹಿಳೆಯರಿಗೆ ನೆರವಾಗಲು ಹಾಗೂ ಸುರಕ್ಷತಾ ಭಾವನೆ ಮೂಡಿಸಲು ಮಹಿಳಾ ಸುರಕ್ಷಾ ದಳ ಸ್ಥಾಪಿಸಲಾಗಿದೆ. ಇದರೊಂದಿಗೆ ಸುರಕ್ಷಾ ಎನ್ನುವ ಹೊಸ ಆಪ್ ಆರಂಭಿಸಲಾಗಿದ್ದು, ಈಗಾಗಲೇ ಈ ಆಪ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಪ್ರತಿಯೊಬ್ಬರೂ ಹೊರರಾಜ್ಯ ಹಾಗೂ ಹೊರದೇಶಗಳಿಂದ ಬರುವ ಪ್ರತಿಯೊಬ್ಬರಿಗೂ ಸುರಕ್ಷತೆ ಒದಗಿಸಲು ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆಯಲು ಕೇಂದ್ರ ಅಪರಾಧ ವಿಭಾಗದಲ್ಲಿ (ಸಿಸಿಬಿ) ಪ್ರತ್ಯೇಕ ಮಹಿಳಾ ಸುರಕ್ಷತಾ ದಳ ಸ್ಥಾಪಿಸಲಾಗಿದೆ. ಮೊಬೈಲ್‌ನಲ್ಲಿ ಸುರಕ್ಷಾ ಆಪ್ ಅಳವಡಿಸಿಕೊಂಡರೆ, ಯಾವುದೇ ತೊಂದರೆಗೆ ಒಳಗಾದವರು ಆಪ್ ಅನ್ನು ಮುಟ್ಟಿದ ತಕ್ಷಣ ಅಲ್ಲಿನ ಚಿತ್ರಣವನ್ನು ಚಿತ್ರೀಕರಿಸಿ, ಪೊಲೀಸ್ ನಿಯಂತ್ರಣಾ ಕೊಠಡಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುರಕ್ಷಾ ಆಪ್ ಡೌನ್ ಲೋಡ್ ಮಾಡಿಕೊಳ್ಳುವಾಗ ತಮ್ಮ ಹೆಸರು ಹಾಗೂ ತಾವು ಅತಿಯಾಗಿ ಇಷ್ಟಪಡುವ ಹಾಗೂ ತಕ್ಷಣ ನೆರವಿಗೆ ಧಾವಿಸುವ ಇಬ್ಬರ ಮೊಬೈಲ್ ಸಂಖ್ಯೆಗಳನ್ನು ದಾಖಲಿಸಬೇಕು. ತೊಂದರೆಗೆ ಸಿಲುಕಿದ ತಕ್ಷಣವೇ ನಿಯಂತ್ರಣಾ ಕೊಠಡಿಯ ಜೊತೆಗೆ ನೆರವಿಗೆ ಧಾವಿಸುವ ಇಬ್ಬರಿಗೆ ಸಂದೇಶ ರವಾನೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಕಾಲೇಜು ವಿದ್ಯಾರ್ಥಿಗಳು, ಗಾರ್ಮೆಂಟ್ಸ್, ಇನ್ನಿತರ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಒಂಟಿಯಾಗಿ ಓಡಾಡುವವರಿಗೆ ಈ ಸುರಕ್ಷಾ ಆಪ್ ನೆರವಿಗೆ ಬರಲಿದೆ ಎಂದು ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ 100ರ ಸಹಾಯವಾಣಿಯನ್ನು ಆಧುನೀಕರಣಗೊಳಿಸಲಾಗಿದ್ದು, ಯಾರೇ ಕರೆ ಮಾಡಿದರೂ, ಕೇವಲ 7 ಸೆಕೆಂಡ್‌ಗಳಿಗೆ ಪ್ರತಿಕ್ರಿಯೆ ದೊರೆಯಲಿದೆ. ಅಲ್ಲದೆ ಅದನ್ನು ಖಚಿತಪಡಿಸುವ ಎರಡು ಎಸ್‌ಎಂಎಸ್‌ಗಳು ರವಾನೆಯಾಗಲಿವೆ.
7 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಬಳಿಗೆ ಹೊಯ್ಸಳ ವಾಹನ ಧಾವಿಸಲಿದೆ. ಪ್ರತಿ ಠಾಣೆಗೆ ಎರಡರಂತೆ, ಹೊಯ್ಸಳ ವಾಹನಗಳಿದ್ದು, ಸಂತ್ರಸ್ತರ ಸ್ಥಳಗಳಿಗೆ ಕೆಲವೇ ನಿಮಿಷಗಳಲ್ಲಿ ಧಾವಿಸಿ, ನೆರವು ನೀಡಲಿದೆ ಎಂದು ಹೇಳಿದರು.
ಪೊಲೀಸ್ ಸಹಾಯವಾಣಿ 100ಕ್ಕೆ ಕರೆಮಾಡಲು ಯಾರೂ ಹೆದರಬೇಕಾಗಿಲ್ಲ. ಸುಳ್ಳು ಕರೆಯನ್ನಾದರೂ ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಲಾಗಿದೆ. ಕರೆ ಮಾಡಿದವರಿಗೆ ತಕ್ಷಣ ನೆರವು ನೀಡುವುದೇ ಪೊಲೀಸರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಅಪರಾಧ ಕೃತ್ಯಗಳಿಂದ ತೊಂದರೆಗೊಳಗಾದ ಸಾರ್ವಜನಿಕರು ಯಾವುದೇ ಪೊಲೀಸ್ ಠಾಣೆಯಲ್ಲಾದಾರೂ ದೂರು ದಾಖಲಿಸಬಹುದು. ಪೊಲೀಸರು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಬೂಬು ಹೇಳುವಂತಿಲ್ಲ. ಒಂದು ವೇಳೆ ಈ ರೀತಿ ದೂರು ನೀಡಲು ಬಂದವರನ್ನು ವ್ಯಾಪ್ತಿಯ ಹೆಸರಿನಲ್ಲಿ ಹಿಂದಕ್ಕೆ ಕಳುಹಿಸಿದರೆ ಅಂತಹ ಪೊಲೀಸರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.