ಪರಿಸರ ಸಂರಕ್ಷಣೆ ನಿರಂತರವಾಗಿ ನಡೆಯಲಿ: ಎಸ್ .ಜಿ.ಪಂಡಿತ್ 4 ವರ್ಷ ಸಸಿಗಳನ್ನು ಪೋಷಿಸಿದರೆ, 500 ವರ್ಷ ನಮ್ಮನ್ನು ರಕ್ಷಿಸುತ್ತವೆ

ಪರಿಸರ ಸಂರಕ್ಷಣೆ ನಿರಂತರವಾಗಿ ನಡೆಯಲಿ: ಎಸ್ .ಜಿ.ಪಂಡಿತ್ 4 ವರ್ಷ ಸಸಿಗಳನ್ನು ಪೋಷಿಸಿದರೆ, 500 ವರ್ಷ ನಮ್ಮನ್ನು ರಕ್ಷಿಸುತ್ತವೆ Environmental protection should be continuous: S.G. Pandit If we nurture saplings for 4 years, they

ಕಾರವಾರ, 17 : ಪರಿಸರದ ಮಹತ್ವ, ಅಗತ್ಯತೆ ಮತ್ತು ಸಂರಕ್ಷಣೆಯ ಕುರಿತಂತೆ ರಾಜ್ಯ ಉಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳು ಮತ್ತು ರಾಜ್ಯದ ಇಬ್ಬರು ಉಪ ಲೋಕಾಯುಕ್ತರು ಹೊನ್ನಾವರದಲ್ಲಿ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಒಗ್ಗಟ್ಟಿನ ಜಾಗೃತಿಯ ಸಂದೇಶ ಸಾರಿದರು.ಹೊನ್ನಾವರದ ಸಾಲಕೋಡ, ಅರೆ ಅಂಗಡಿಯ ಕರಿಕಾನ ಪರಮೇಶ್ವರಿ ಆವರಣದಲ್ಲಿ ರವಿವಾರ, ವಕೀಲರ ಸಂಘ (ರಿ) ಹೊನ್ನಾವರ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಯನ್ನು ಸಂಯುಕ್ತವಾಗಿ ಉದ್ಘಾಟಿಸಿದರು. 

ನ್ಯಾಯಮೂರ್ತಿ. ಎಸ್‌.ಜಿ ಪಂಡಿತ್ ಮಾತನಾಡಿ, ಪರಿಸರ ದಿನಾಚರಣೆಯ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ, ವರ್ಷ ಪೂರ್ತಿ ನಡೆಯಬೇಕು, ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಬೇಕು. ಪರಿಸರ ಉಳಿಸುವ ಹಾಗೂ ಸಂರಕ್ಷಣೆ ಮಾಡುವ ಕೆಲಸ ಒಂದು ಇಲಾಖೆಗೆ ಮಾತ್ರ ಸೀಮಿತವಾಗದೇ ಪತ್ರಿಯೊಬ್ಬರ ಜವಾಬ್ದಾರಿಯಾಗಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ಈ ಬಗ್ಗೆ ಶಿಕ್ಷಕರು ಜಾಗೃತಿ ಮೂಡಿಸಬೇಕು ಎಂದರು.ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಮಾತನಾಡಿ,ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಅವುಗಳನ್ನು ಪೋಷಣೆ ಸಂರಕ್ಷಣೆ ಮಾಡಬೇಕು, 4 ವರ್ಷ ಅವುಗಳನ್ನು ಪೋಷಿಸಿದರೆ 500 ವರ್ಷ ಅವುಗಳು ನಮ್ಮನ್ನು ಕಾಪಾಡುತ್ತವೆ ಎಂದರು.ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಎಲ್ಲರಿಗೂ ಅರಿವಾಗಿದೆ. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಜೊತೆಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ, ಅವುಗಳ ನಿಯಂತ್ರಣ ಹಾಗೂ ನಿಷೇಧದ ಬಗ್ಗೆಯೂ ತಿಳಿಸಬೇಕು ಎಂದು ನ್ಯಾ.ಪ್ರದೀಪ್ ಸಿಂಗ್ ಯೆರೂರ್ ತಿಳಿಸಿದರು. 

ಇಂದು ನಾವು ಪರಿಸರ ಉಳಿಸುವ ಕಾರ್ಯ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಸಂದೇಶ ನೀಡಬೇಕು, ನಮ್ಮ ಜಿಲ್ಲೆ ಹಾಗೂ ರಾಜ್ಯ ಹಸಿರುನಿಂದ ಕೂಡಿರುವಂತಾಗಲಿ ಎಂದು ನ್ಯಾ. ಅನಂತ ರಾಮನಾಥ ಹೆಗಡೆ ಹೇಳಿದರು.ನ್ಯಾ. ಸಿ. ಎಂ. ಜೋಷಿ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್ ಬಳಸುವುದಿಲ್ಲ, ಪ್ಲಾಸ್ಟಿಕ್ ವಸ್ತುಗಳ ಬಳಕೆಯ ನಿಯಂತ್ರಣ, ಪರಿಸರದಿಂದ ಅಗತ್ಯವಿರುವಷ್ಟು ಮಾತ್ರ ಪಡೆದು ಸಮತೋಲನ ಕಾಪಾಡುವಂತೆ ಪ್ರತಿಯೊಬ್ಬರೂ ಸ್ವಯಂ ಪ್ರತಿಜ್ಞೆ ಸ್ವೀಕರಿಸಬೇಕು, ಸುಸ್ಥಿರ ಅಭಿವೃದ್ಧಿಯಡೆಗೆ ನಡೆಯುವಾಗ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.ಉಪ ಲೋಕಾಯುಕ್ತ ನ್ಯಾ. ಕೆ.ಎನ್‌.ಫಣೀಂದ್ರ ಮಾತನಾಡಿ, ಸಕಲ ಜೀವರಾಶಿಗೆ ಪ್ರಕೃತಿ ತಾಯಿಯಿದ್ದಂತೆ, ಹಸಿರು ನಿಂತರೆ ಉಸಿರು ನಿಂತಠೆ ಎಂಬುದನ್ನು ಎಲ್ಲರೂ ತಿಳಿಯಬೇಕು, ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗುತ್ತಿದ್ದು ಇದನ್ನು ತಡೆದು ಪರಿಸರ ಸಮತೋಲನ ಕಾಪಾಡಬೇಕು ಎಂದರು. 

ಉಪ ಲೋಕಾಯುಕ್ತ ನ್ಯಾ.ಬಿ.ವೀರ​‍್ಪ ಮಾತನಾಡಿ,ವಿದ್ಯಾರ್ಥಿಗಳು ತಮ್ಮ ಜನ್ಮದಿನದಂದು ಒಂದೊಂದು ಗಿಡ ನೆಟ್ಟು ಪೋಷಿಸಬೇಕು, ಪ್ರಕೃತಿ ಮುನಿದರೆ ಅಪಾಯ ತಪ್ಪಿದ್ದಲ್ಲ, ಅರಣ್ಯ ನಾಶದಿಂದ ಈಗಾಗಲೇ ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಆರಂಭವಾಗಿದೆ. ಲೋಕಾಯುಕ್ತದ ವತಿಯಿಂದ ಈ ವರ್ಷ ಈಗಾಗಲೇ 1,20,000 ಗಿಡಗಳನ್ನು ನೆಡಲಾಗಿದ್ದು ,ಇದು ಇನ್ನೂ ಮುಂದುವರೆಯಲಿದೆ ಎಂದರು.  

ಕೆನರ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ, ಉ. ಕನ್ನಡ ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ಸಾರ್ವಜನಿಕರು ಅತ್ಯಂತ ಹೆಚ್ಚಿನ ಕೂಡುಗೆ ಮತ್ತು ಸಹಕಾರ ನೀಡುತ್ತಿದ್ದಾರೆ ಎಂದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ ಇಂದಿನ ಕಾರ್ಯಕ್ರಮದಲ್ಲಿ 6000 ಗಿಡಗಳನ್ನು ನೆಡಲಾಗಿದ್ದು ಇವುಗಳನ್ನು ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಎಂ. ಆರ್‌. ನಾಯಕ್, ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆಯ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಅಲಂ ಶರೀಫ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ. ಎಲ್‌. ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ, ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ.... 

ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಆಗಮಿಸುತ್ತಿದ್ದ ಉಪ ಲೋಕಾಯುಕ್ತರಾದ ನ್ಯಾ. ಕೆ.ಎನ್‌.ಫಣೀಂದ್ರ ಮತ್ತು ನ್ಯಾ.ಬಿ.ವೀರ​‍್ಪ ಅರ್ಧದಾರಿಗೆ ಬರುವಾಗ ಸಕಲೇಶಪುರ ಬಳಿ ಗುಡ್ಡ ಕುಸಿದು ರೈಲು ಪ್ರಯಾಣ ರದ್ದುಗೊಂಡರೂ ಕೂಡಾ ರೈಲ್ವೆ ನಿಲ್ದಾಣದಲ್ಲಿಯೇ ಊಟ ಮಾಡಿ, ಹೊನ್ನಾವರ ಕ್ಕೆ ಬರುವ ಬಸ್ ಗೆ ಕಾದು, ಅದರಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಆಗಮಿಸುವ ಮೂಲಕ ಪರಿಸರದ ಕುರಿತು ಕಾರ್ಯಕ್ರಮಕ್ಕೆ ತಾವು ನೀಡುವ ಮಹತ್ವ ಮತ್ತು ಪರಿಸರದ ಮೇಲಿನ ತಮ್ಮ ಕಾಳಜಿ ವ್ಯಕ್ತಪಡಿಸಿದ್ದರು 

ಬಾಕ್ಸನ್ಯಾಯಮೂರ್ತಿ. ಪ್ರದೀಪ್ ಸಿಂಗ್ ಯೆರೂರ್ ತಮ್ಮ ಭಾಷಣದಲ್ಲಿ, ಮಾತೃ ಭಾಷೆಯ ಬಗ್ಗೆ ವಕೀಲರಿಗೆ ಅಭಿಮಾನ ಇರಬೇಕು, ನ್ಯಾಯಾಲಯದಲ್ಲಿ ಇಂಗ್ಲೀಷ್ ಬರುವುದಿಲ್ಲ ಎಂಬ ಕೀಳರಿಮೆ ಬೇಡ, ಕನ್ನಡದಲ್ಲಿ ವಾದ ಮಾಡಿ ಎಂದು ಹೇಳಿದ್ದು, ಪಂಜಾಬ್ ಮೂಲದವರಾದರೂ ಅವರೂ ಕೂಡಾ ಬಹುತೇಕ ಕನ್ನಡದಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು