ಲೋಕದರ್ಶನ ವರದಿ
ಬೆಳಗಾವಿ 06: ನಿಸರ್ಗ ಎಲ್ಲರ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಹೊಂದಿದೆ. ಹಾಗೆ ಅದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಎಂದು ಹಿರಿಯ ಪರಿಸರವಾದಿ ಶ್ರೀ.ಶಿವಾಜಿ ಕಾಂಗಿನಕರ್ ನುಡಿದರು.
ಅವರು ಶುಕ್ರವಾರ ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಅರ್ಥಶಾಸ್ತ್ರ ಮತ್ತು ಭೂಗೋಳಶಾಸ್ತ್ರ ವಿಭಾಗದಿಂದ ಆಯೋಜಿಸದ್ದ "ಜಲಶಕ್ತಿ ಅಭಿಯಾನ" ಒಂದು ದಿನದ ರಾಷ್ಟ್ರಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ಮಿತಿಮೀರಿದ ಚಟುವಟಿಕೆಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ. ಭೂಮಿಯ ಮೇಲಿನ ಶುದ್ಧ ಕುಡಿಯುವ ನೀರಿನ ಪ್ರಮಾಣ ಬಹಳ ಕಡಿಮೆ ಇದ್ದು ಅದನ್ನು ಸಂರಕ್ಷಿಸಿಸುವ ಕಾರ್ಯವಾಗಬೇಕು, ಹೆಚ್ಚು ಮರಗಳನ್ನು ನೇಡುವುದರ ಮೂಲಕ ಅಂತರ್ಜಲದ ಪ್ರಮಾಣವನ್ನು ಹೆಚ್ಚಿಸಬೇಕೆಂದು ತಿಳಿಸಿದರು. ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ ಮುಂದಿನ ಪಿಳಿಗೆಯ ಭವಿಷ್ಯಕ್ಕಾಗಿ ಜಲ ಸಂರಕ್ಷಣೆ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಲಸಂರಕ್ಷಣೆಯಲ್ಲಿ ಕಾರ್ಯನಿರತರಾಗುವುದರ ಮೂಲಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಶಕ್ತಿ ಅಭಿಯಾನದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಎನ್.ಮೂಲಿಮನಿ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಎ.ಮಠಪತಿ ವಂದಿಸಿದರು ಐಶ್ವರ್ಯಾ ಹಾಗೂ ಸುಪ್ರಿಯಾ ನಿರೂಪಿಸಿದರು. ಉಪಪ್ರಾಚಾರ್ಯ ಎಂ.ಆರ್.ಬನಹಟ್ಟಿ, ವಿಚಾರ ಸಂಕಿರಣದ ಕಾರ್ಯದರ್ಶಿಗಳಾದ ಡಾ.ಜಿ.ಎನ್.ಶೀಲಿ ಹಾಗೂ ಡಾ.ರಾಘವೇಂದ್ರ ಹಜಗೋಳಕರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ಹಾಗೂ ಗೋವಾದ 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು.