ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಜಿ.ಆರ್‌. ಸೋನೇರ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಜಿ.ಆರ್‌. ಸೋನೇರ  Environmental conservation is everyone's responsibility: G.R. Sonera

ಲೋಕದರ್ಶನ ವರದಿ 

 ಬೆಳಗಾವಿ   03: ಪರಿಸರ ಸಂರಕ್ಷಣೆ ಕೇವಲ ಗಿಡಗಳನ್ನು ನೆಡುವುದರಿಂದ ಮಾತ್ರ ಸಾಧ್ಯವಲ್ಲ. ಅವುಗಳನ್ನು ಬೆಳೆಸಿ, ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜನಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಜಿ.ಆರ್‌. ಸೋನೇರ ಹೇಳಿದರು.  

ತಾಲೂಕಿನ ಕಮಕಾರಟ್ಟಿ ಗ್ರಾಮದ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪಹಿ ವೈಬ್ಸ್‌ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ನಾಯಕ್ ಮಾತನಾಡಿ, ಗೋಶಾಲೆ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಗಿಡಗಳನ್ನು ನೆಟ್ಟ ನಂತರ ಅವುಗಳ ಸಂರಕ್ಷಣೆಗೆ ಆದ್ಯತೆ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ಅಗತ್ಯವಾಗಿದೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನೋಜ್ ಸಂತೆ ಮಾತನಾಡಿ, ಗೋಶಾಲೆ ಆವರಣದಲ್ಲಿ ಪರಿಸರ ಸಂರಕ್ಷಣೆಗೆ ಪೂರಕವಾದ ಕಾರ್ಯಕ್ರಮವನ್ನು ಆಯೋಜಿಸಿ ಗಿಡಗಳನ್ನು ನೆಡುವುದು ಸಂತಸದ ಸಂಗತಿಯಾಗಿದೆ. ಇದು ಭವಿಷ್ಯದಲ್ಲಿ ಪರಿಸರ ಸಮತೋಲನ ಕಾಪಾಡಲು ಮಹತ್ವದ ಕೊಡುಗೆಯಾಗಲಿದೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಬಸವರಾಜ ಸೋಪ್ಪಿನಮಠ, ಪಹಿ ವೈಬ್ಸ್‌ ಫೌಂಡೇಶನ್ ಮುಖ್ಯಸ್ಥ ರಕ್ಷಾ ಉಪಾಧ್ಯ, ವಿರೂಪಾಕ್ಷ ಇಟ್ಟಿಗೆ, ಮಂಜುನಾಥ ನಾಗೂಜಿ, ಯೋಜನಾಧಿಕಾರಿ ಸುಭಾಷ್ ಪಿ.ಸಿ., ರೈತರ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಗೋಶಾಲೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಂಕರ ಅರಗೋಳ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ವಂದಿಸಿದರು.