ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪರಿಸರ ಜಾಗೃತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪರಿಸರ ಜಾಗೃತಿ Environmental awareness from Dharmasthala Rural Development Organization

ದೇವರಹಿಪ್ಪರಗಿ 30 :ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಏಳಿಗೆಯ ಮೂಲಕ ದೇಶದ ಉನ್ನತಿ ಕಾರ್ಯವನ್ನು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಹಾಗೂ ಡಾ. ಹೇಮಾವತಿ ಹೆಗಡೆ ಅಮ್ಮನವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಗ್ರಾಮೀಣ ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದಾರೆ ಎಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಣ್ಣಪ್ಪಗೌಡ ಬೋರಾವತ್ ಹೇಳಿದರು.

ತಾಲೂಕಿನ ಕೋರವಾರ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸ್ವ ಸಹಾಯ ಸಂಘಗಳ ಒಕ್ಕೂಟ ಹಾಗೂ ಶಾಲಾ ವತಿಯಿಂದ ನಡೆದ ಪರಿಸರ ಸಂರಕ್ಷಣ ಮಾಹಿತಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮನುಷ್ಯ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ’ ಎಂದರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕೃಷಿ ಅಧಿಕಾರಿ ಸುರೇಶ್‌.ಟಿ ಮಾತನಾಡಿ,  ಕೊರೋನಾ ಮಹಾಮಾರಿಯಿಂದ ಇಡಿ ಜಗತ್ತೇ ತಲ್ಲಣಗೊಂಡಿತ್ತು, ಅತಿ ಹೆಚ್ಚು ಕೋವಿಡ್ ಸೋಂಕಿತರು ಆಮ್ಲಜನಕ ಕೊರತೆಯಿಂದ ಮರಣ ಹೊಂದಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಭವಿಷ್ಯದ ಹಿತದೃಷ್ಟಿಯಿಂದ ಗಿಡ ಮರಗಳನ್ನು ಬೆಳಸಲು ಯೋಚನೆ ಮಾಡಿದಿದ್ದಲ್ಲಿ ಭವಿಷ್ಯದಲ್ಲಿ ಮನುಷ್ಯ ಪಶ್ಚಾತ್ತಾಪ ಪಡುತ್ತಾನೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಶ್ರೀಗಳ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ವಿಜ್ಞಾನ ಶಿಕ್ಷಕರಾದ ಪೂಜಾ ಸಾಗರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಪಿ.ಎಸ್‌.ಜಾಲವಾದ, ಪಿ.ಬಿ.ಪೂಜಾರಿ, ಬಿ.ಎಸ್‌.ಸಿದ್ದರೆಡ್ಡಿ, ಎಸ್‌.ಬಿ.ಬೋರವತ್, ವಾಯ್‌.ಎಸ್‌.ಮುನವಳ್ಳಿ, ಯು.ಬಿ.ಪಾಟೀಲ, ಎನ್‌.ಎನ್‌.ನಿಡಗುಂದಿ, ಪಿ.ಕೆ.ಸಾಗರ,ಭಾವನಾ ಪಾಟೀಲ, ವಲಯ ಮೇಲ್ವಿಚಾರಕರಾದ ಮೀನಾಕ್ಷಿ, ಒಕ್ಕೂಟದ ಕಾರ್ಯದರ್ಶಿ ರೇಣುಕಾ ಬಾಗೇವಾಡಿ, ಶಿವ ಪ್ರತಿನಿಧಿಗಳಾದ ಭಾರತಿ ಹಾಗೂ ಶಾಂತ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು