ಉತ್ತರ ಪ್ರದೇಶಕ್ಕೆ ಪ್ರವೇಶಿಸುವವರು 14 ದಿನಗಳ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯ: ಯೋಗಿ ಆದಿತ್ಯನಾಥ್

ಲಕ್ನೋ, ಮಾ.29, ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವುದನ್ನು ತಪ್ಪಿಸಲು ಉತ್ತರಪ್ರದೇಶಕ್ಕೆ ಪ್ರವೇಶಿಸುವ ಎಲ್ಲರನ್ನೂ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರೆಂಟೈನ್ ಅಥವಾ ಪ್ರತ್ಯೇಕವಾಗಿ ಇರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ನಿರ್ದೇಶನ ನೀಡಿದ್ದಾರೆ.ಲಾಕ್‌ಡೌನ್‌ನಿಂದಾಗಿ ಉದ್ಯೋಗಿಗಳ ಗಳಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರ ವೇತನವನ್ನು ಅವರ ಉದ್ಯೋಗದಾತರು ಕಡಿತಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.ಭಾನುವಾರ 11 ಸದಸ್ಯರ ತಂಡದೊಂದಿಗೆ ಕೊರೋನಾ ತಡೆ ಕುರಿತ ದೈನಂದಿನ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮುಖ್ಯಮಂತ್ರಿ ಈ ಆದೇಶ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಲಾಕ್ ಡೌನ್ ವೇಳೆ ವಿವಿಧ ಕ್ಷೇತ್ರಗಳನ್ನು ನೋಡಿಕೊಳ್ಳುವ ಹಿರಿಯ ಅಧಿಕಾರಿಗಳ 11 ಸಮಿತಿಗಳನ್ನು ಈ ತಂಡ ಒಳಗೊಂಡಿದೆ.
ಆರೋಗ್ಯ ವಿಷಯದಲ್ಲಿ ರಾಜ್ಯ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ರಾಜ್ಯಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯೂ 14 ದಿನಗಳ ಕಡ್ಡಾಯ ಪ್ರತ್ಯೇಕತೆ ಅಥವಾ ಸಂಪರ್ಕ ತಡೆಯಲ್ಲಿ ಇರಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಲ್ಲಾ ಜಿಲ್ಲೆಗಳು ಮತ್ತು ಇತರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. "ಇದಕ್ಕಾಗಿ, ಜನರು ಆರೋಗ್ಯ ಶಿಷ್ಟಾಚಾರವನ್ನು ಪಾಲಿಸುವಂತೆ ಮಾಡುವುದು ಮತ್ತು ಅವರ ಮನೆಗಳಿಗೆ ತೆರಳುವ ಮೊದಲು ಅವರನ್ನು ಸಂಪರ್ಕ ತಡೆಯಲ್ಲಿ ಇರಿಸುವುದು ಜಿಲ್ಲೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.ಈ ಆದೇಶದ ಹಿನ್ನೆಲೆಯಲ್ಲಿ, ಕಳೆದ ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಪ್ರವೇಶಿಸಿದ್ದ ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ರಾಜ್ಯದಲ್ಲಿ ಸಂಪರ್ಕ ತಡೆಯಲ್ಲಿ ಇರಬೇಕಾಗುತ್ತದೆ. ವಿದೇಶದಿಂದ ಮರಳಿದ ಎಲ್ಲರೂ ತಮ್ಮ ಆರೋಗ್ಯ ಮತ್ತು ಪ್ರಯಾಣದ ವಿವರಗಳೊಂದಿಗೆ ತಮ್ಮ ಹತ್ತಿರದ ಜಿಲ್ಲಾಡಳಿತವನ್ನು ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ. ಜನರು ಅಧಿಕಾರಿಗಳಿಗೆ ಮಾಹಿತಿ ನೀಡಲು ನಿರಾಕರಿಸಿದರೆ ಸರ್ಕಾರವು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ,  ತಮ್ಮ ಪ್ರದೇಶದಲ್ಲಿರುವ ಎಲ್ಲಾ ದೈನಂದಿನ ಕೂಲಿ ಕಾರ್ಮಿಕರಿಗೆ 1,000 ರೂ. ಪಾವತಿಸುವಂತೆ ಯೋಗಿ ಆದಿತ್ಯನಾಥ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಲಾಕ್ ಡೌನ್‌ ಅವಧಿಯಲ್ಲಿ ಬಾಡಿಗೆದಾರರಿಗೆ ಬಾಡಿಗೆ ಪಾವತಿಸುವಂತೆ ಒತ್ತಾಯಿಸಬಾರದು ಎಂದು ಭೂಮಾಲೀಕರಿಗೆ ಮತ್ತು ಮನೆ ಮಾಲೀಕರಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ."ಇತರ ರಾಜ್ಯಗಳ ಎಲ್ಲಾ ವಲಸೆ ಕಾರ್ಮಿಕರು ಲಾಕ್ ಡೌನ್ ಅವಧಿಯಲ್ಲಿ ಯುಪಿಯಲ್ಲೇ ಉಳಿಯಬೇಕು ಎಂದು ನಾನು ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರವು ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಸಮಯದಲ್ಲಿ ಬೇರೆ ಕಡೆ ತೆರಳುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.