ಕ್ರೀಡಾಂಗಣಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್

ಕ್ರೀಡಾಂಗಣಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್  Ensure high-quality construction of stadiums: Deputy Commissioner C.N. Sridhar

ಗದಗ 28: ಕ್ರೀಡಾ ಇಲಾಖೆಯಡಿ ಜಿಲ್ಲೆಯಲ್ಲಿ ಕೈಗೆೊಳ್ಳಲಾಗುತ್ತಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದಷ್ಟೇ ಅಲ್ಲದೆ, ದೀರ್ಘಕಾಲ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಬರುವಂತಿರಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.  ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಯ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಕ್ರೀಡಾ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಗುಣಮಟ್ಟದ ಕೊರತೆ ಕಂಡುಬರಬಾರದು. ಸರ್ಕಾರದ ಅನುದಾನವನ್ನು ಅತ್ಯಂತ ಜವಾಬ್ದಾರಿಯಿಂದ ಬಳಸಬೇಕು. ಕಾಮಗಾರಿ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ ಮಾತ್ರ ಬಿಲ್ ಪಾವತಿಸದೆ, ಸಂಬಂಧಿತ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ ಕಾಮಗಾರಿಯ ಗುಣಮಟ್ಟ, ನಿರ್ಮಾಣದ ಸ್ಥಿರತೆ ಹಾಗೂ ಸಾರ್ವಜನಿಕ ಬಳಕೆಗೆ ಯೋಗ್ಯತೆಯನ್ನು ಖಚಿತಪಡಿಸಿಕೊಂಡ ನಂತರವೇ ಅಂತಿಮ ಬಿಲ್ಗೆ ಅನುಮೋದನೆ ನೀಡಬೇಕು ಎಂದು ನಿರ್ದೇಶನ ನೀಡಿದರು.  

ಜಿಲ್ಲೆಯ ಕ್ರೀಡಾಂಗಣಗಳು ಕೇವಲ ಕ್ರೀಡಾ ಸ್ಪರ್ಧೆಗಳಿಗಷ್ಟೇ ಸೀಮಿತವಾಗದೆ, ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಾರ್ವಜನಿಕರು ವಾಯುವಿಹಾರ ನಡೆಸಲು, ಯುವಕರು ದೈಹಿಕ ವ್ಯಾಯಾಮ ಮಾಡಲು ಹಾಗೂ ಕ್ರೀಡಾಪಟುಗಳು ನಿಯಮಿತ ತರಬೇತಿ ಪಡೆಯಲು ಅನುಕೂಲಕರ ವಾತಾವರಣ ಹೊಂದಿರಬೇಕು. ಕ್ರೀಡಾಂಗಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.  

ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗದ ಮಕ್ಕಳಿಗೂ ಸರ್ಕಾರಿ ಕ್ರೀಡಾ ಸೌಲಭ್ಯಗಳು ಸಮರ​‍್ಕವಾಗಿ ತಲುಪಬೇಕು. ಸೂಕ್ತ ತರಬೇತಿ, ಮೂಲಸೌಕರ್ಯ ಹಾಗೂ ಪ್ರೋತ್ಸಾಹದ ಮೂಲಕ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಯೋಜಿತವಾಗಿ ಕಾರ್ಯನಿರ್ವಹಿಸಿ ಪ್ರತಿಯೊಂದು ಕ್ರೀಡಾಂಗಣವೂ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.  

ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಕ್ರೀಡಾಂಗಣಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ಪೂರ್ಣಗೊಂಡಿರುವ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳು, ನಿರ್ವಹಣೆಯ ಸ್ಥಿತಿ ಮತ್ತು ಲಭ್ಯವಿರುವ ಸೌಲಭ್ಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಕ್ರೀಡಾಂಗಣಗಳ ಪರಿಣಾಮಕಾರಿ ಬಳಕೆ, ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿ ಸದಸ್ಯರು ಅಭಿಪ್ರಾಯ ಹಂಚಿಕೊಂಡರು.  

ತಾಲೂಕು ಮಟ್ಟದ ಕ್ರೀಡಾಂಗಣಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಆಯಾ ತಾಲೂಕುಗಳ ಕ್ರೀಡಾಂಗಣಗಳ ಉಸ್ತುವಾರಿಯನ್ನು ಸಂಬಂಧಿತ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಿಗೆ ವಹಿಸುವ ಕುರಿತು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಇದರಿಂದ ಕ್ರೀಡಾಂಗಣಗಳ ನಿರ್ವಹಣೆ ಸುಧಾರಿಸುವುದರ ಜೊತೆಗೆ ಸೌಲಭ್ಯಗಳ ಸದ್ಬಳಕೆ ಹಾಗೂ ಕ್ರೀಡಾ ಚಟುವಟಿಕೆಗಳ ನಿರಂತರ ಮೇಲ್ವಿಚಾರಣೆಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.  

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೊಗೇರಿ ಸಭೆಗೆ ಆಗಮಿಸಿದ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಸ್ವಾಗತಿಸಿ, ಸಭೆಯ ಅಜೆಂಡಾದ ವಿಷಯಗಳ ಕುರಿತು ಮಾಹಿತಿ ನೀಡಿದರು.  ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಎಸ್‌.ಎಸ್‌. ಕಲ್ಮನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ, ಸಿಪಿಐ ಎಲ್‌.ಕೆ. ಜುಳಕಟ್ಟಿ, ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.