ಧಾರವಾಡ -19: ಸಹಕಾರ ಕ್ಷೇತ್ರಕ್ಕೆ ನಿರ್ದಿಷ್ಟ ಗುರಿ ಇದೆ. ಸಮಾಜದಲ್ಲಿ ಶೋಷಣೆಯನ್ನು ತಗ್ಗಿಸಿ, ಸರ್ವರಿಗೂ ಸಮಪಾಲು, ಸಮಬಾಳಲು ಎಂಬ ತತ್ವದಡಿ ಸ್ಥಾಪಿತವಾದ ಪತ್ತಿನ ಸಹಕಾರ ಸಂಘಗಳು ತನ್ನ ಸದಸ್ಯರಿಗೆ ಉತ್ತಮ ಆಂತರಿಕ ಸಾಲ ಸೌಲಭ್ಯ ನೀಡಿ ಪೈಪೋಟಿ ಈ ಜಗತ್ತಿನಲ್ಲಿ ಪ್ರಗತಿಯತ್ತ ಮುನ್ನಡೆಯಬೇಕೆಂದು ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕ ಗುರುರಾಜ ಹುಣಸಿಮರದ ಕರೆ ನೀಡಿದರು.
ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ನಿ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಧಾರವಾಡ ಮತ್ತು ನವಲಗುಂದ ತಾಲೂಕಿನ ಪತ್ತಿನ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ಜಿಲ್ಲಾ ವಿಶೇಷ ತರಬೇತಿ ಶಿಬಿರದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಸಹಕಾರ ಕ್ಷೇತ್ರದ ವ್ಯಾಪ್ತಿ ಹೆಚ್ಚಿದಂತೆ ಸಮಸ್ಯೆಗಳು ಹೆಚ್ಚುತ್ತಿವೆ ಈ ಸಮಸ್ಯೆಗಳ ಬಗ್ಗೆ ಎಲ್ಲರೂ ಚಿಂತನೆ, ಪರಿಹಾರ ಕಂಡುಕೊಳ್ಳಬೇಕು ಅಂದಾಗ ಮಾತ್ರ ಸಹಕಾರ ಕ್ಷೇತ್ರದ ಅಭಿವೃದ್ಧಿ ಸಾಧ್ಯವೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ದ ಉಪಾಧ್ಯಕ್ಷ ಪ್ರತಾಪ ಎ. ಚವ್ಹಾಣ ಅವರು ಮಾತನಾಡುತ್ತ, ಸಹಕಾರ ಸಂಘಗಳ ಅಭಿವೃದ್ಧಿಗೆ ಶಿಕ್ಷಣ ತರಬೇತಿ ಅವಶ್ಯ. ಸಹಕಾರ ಸಂಘಗಳ ಉತ್ತಮ ಕಾರ್ಯನಿರ್ವಹಣೆಗಾಗಿ ಸಹಕಾರ ಕಾಯ್ದೆ ಮತ್ತು ಉಪನಿಯಮಗಳ ಅರಿವು ಅಗತ್ಯವಾಗಿರುತ್ತದೆ. ಇಂತಹ ಕಾರ್ಯವನ್ನು ಯೂನಿಯನ್ವು ಮಾಡುತ್ತಿರುವದು ಶ್ಲಾಘನೀಯ. ಇಂತಹ ತರಬೇತಿಗಳು ನಾಯಕರುಗಳಿಗೆ ಪರಿಪಕ್ವತೆ ರೂಢಿಸಿಕೊಳ್ಳಬೇಕೆಂದು ಹೇಳಿದರು.
ಕೆಲಗೇರಿ ಶಿವಶಕ್ತಿ ಮಹಿಳಾ ವಿವಿದೊದ್ದೇಶ ಸಹಕಾರ ಸಂಘಗಳ ಅಧ್ಯಕ್ಷ ವಿಜಯಲಕ್ಷ್ಮಿ ಲೂತಿಮಠ ಅವರು ಮಾತನಾಡುತ್ತ, ಸಹಕಾರ ಸಂಘಗ ಪ್ರಜಾ ಸತ್ತಾತ್ಮಕ ಸಂಘಟನೆಗಳಾಗಿದ್ದು, ಅವುಗಳ ಕಾರ್ಯ ಚಟುವಟಿಕೆಗಳಲ್ಲಿ ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸಬೇಕು. ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸುವುದರಿಂದ ಮಾತ್ರ ಸಂಘಗಳು ಪ್ರಗತಿ ಹೊಂದುವುದು ಸಾಧ್ಯವೆಂದರು.
ಅಧ್ಯಕ್ಷತೆ ವಹಿಸಿದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ದ ಮತ್ತು ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ ಅವರು ಸಹಕಾರ ಸಂಘಗಳು ಇಡಿ ದೇಶದಲ್ಲಿ ಸಂಕಷ್ಟದಲ್ಲಿವೆ. ಅವುಗಳ ಪುನಶ್ಚೇತನಕ್ಕೆ ಸರ್ಕಾರವು ಪ್ರೋತ್ಸಾಹಿಸಬೇಕು. ಈ ಸಂಘಗಳು ಉಳಿದರೆ ಸಹಕಾರ ತತ್ವಗಳು ಉಳಿಯುತ್ತವೆ ಎಂದರು. ಸಹಕಾರ ಸಂಘಗಳು ಕಡು ಬಡವರಿಗೆ ಆದ್ಯತೆಯ ಮೇಲೆ ಸಾಲ ಸೌಲಭ್ಯ ಒದಗಿಸಬೇಕೆಂದು ಹೇಳಿದರು.
ಯೂನಿಯನ್ದ ನಿರ್ದೇಶಕರಾದ ಎಫ್.ಆರ್. ಕಲ್ಲನಗೌಡ್ರ, ಪಿ.ಪಿ. ಗಾಯಕವಾಡ ಮತ್ತು ಗೀತಾ ಎಸ್. ಕುಂಬಿ, ಸಹಕಾರ ಸಂಘಗಳ ಉಪನಿಬಂಧಕಿ ಸಾವಿತ್ರಿ ಬಿ. ಕಡಿ ಮತ್ತು ಕೆಐಸಿಎಂ ನಿವೃತ್ತ ಉಪನ್ಯಾಸಕ ಎಂ.ಜಿ. ಪಾಟೀಲ ಅವರು ಉಪಸ್ಥಿತರಿದ್ದರು.
ಆನಂದ ಗು. ತಳವಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಹಿರೇಮಠ ನಿರೂಪಿಸಿ ವಂದಿಸಿದರು.