ಶಾಂತಿ ಸೌಹಾರ್ದತೆಯ ಮೊಹರಂ ಆಚರಣೆಗೆ ಒತ್ತು
Emphasis on celebrating Muharram in peace and harmony
ಸವದತ್ತಿ 17: ನಗರದ ಮುಂಬರುವ ಮೊಹರಂ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ, ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಪೂರ್ವಭಾವಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿ, ಕೋಮು ಸೌಹಾರ್ದತೆಯನ್ನು ಎತ್ತಿಹಿಡಿಯುವ ಮೂಲಕ ಈ ಬಾರಿ ಹಬ್ಬವನ್ನು ಸಂಪ್ರದಾಯದಂತೆ ಸಾಮರಸ್ಯದಿಂದ ಆಚರಿಸಲು ಒಮ್ಮತದಿಂದ ನಿರ್ಧರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಐ ಸುರೇಶ ಬೆಂಡೆಗುಂಬಳ ಅವರು, ಸವದತ್ತಿ ನಗರವು ದಶಕಗಳಿಂದ ಹಿಂದೂ ಮುಸ್ಲಿಂ ಬಾಂಧವ್ಯ ಮತ್ತು ಐಕ್ಯತೆಗೆ ಹೆಸರಾಗಿದೆ. ಇಲ್ಲಿನ ಜನರು ಎಲ್ಲ ಹಬ್ಬಗಳನ್ನು ಪರಸ್ಪರ ಪ್ರೀತಿ ಹಾಗೂ ವಿಶ್ವಾಸದಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಮೊಹರಂ ಹಬ್ಬವನ್ನು ಧಾರ್ಮಿಕ ಶ್ರದ್ಧೆ ಹಾಗೂ ಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸಬೇಕು ಎಂದು ಕರೆ ನೀಡಿದರು.
ಹಬ್ಬದ ಆಚರಣೆಯ ಕುರಿತು ಮಹತ್ವದ ಸೂಚನೆಗಳನ್ನು ನೀಡಿದ ಪಿಐ ಅವರು, ಹೈಕೋರ್ಟ್ ಆದೇಶದಂತೆ ಹಬ್ಬದ ಆಚರಣೆಯಲ್ಲಿ ಡಿಜೆ ಬಳಕೆಗೆ ಸಂಪೂರ್ಣ ನಿಷೇಧವಿದೆ. ಪ್ರತಿಯೊಬ್ಬರೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಡಿಜೆಗೆ ಬದಲಾಗಿ ಕರಡಿ ಮಜಲು, ಲೇಜಿಮ್ ಮುಂತಾದ ಸಾಂಪ್ರದಾಯಿಕ ಕಲೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಅಲ್ಲದೆ, ಸಮಾಜದ ಶಾಂತಿಗೆ ಭಂಗ ತರುವ ಅಥವಾ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ವ್ಯಕ್ತಿಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೊಹರಂನ ಕೊನೆಯ ದಿನವನ್ನು ಹಿಂದೂ-ಮುಸ್ಲಿಂ ಬಾಂಧವರು ಹಿಂದಿನಂತೆ ಒಗ್ಗೂಡಿ, ಅರ್ಥಪೂರ್ಣವಾಗಿ ಆಚರಿಸುವ ಪದ್ಧತಿಯನ್ನು ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ದಿಲಾವರ ಮುಲ್ಲಾ,ಭರಮಪ್ಪ ಅಣಿಗೇರಿ, ಮೌಲಾಸಾಬ ತಬ್ಬಲಜಿ, ರಿಯಾಜ ಪಟಾದ, ಅರ್ಜುನ ಅಮೋಜಿ, ಮಕ್ತುಮಹುಸೇನ ತಹಶೀಲ್ದಾರ, ಹನಮಂತ ಪಾಟೀಲ್, ಭೀಮಶಿ ಇಳಗೇರ, ರಾಜು ಹಳಕಟ್ಟಿ, ರಾಜು ಬಳ್ಳಾರಿ, ದಿಲಾವರ ಬೆಟಗೇರಿ, ಬಸವರಾಜ ಮಾಳಮನಿ, ಶಾಹಜಾನ ಸಂಗೊಳ್ಳಿ, ಪಕ್ಕೀರ್ಪ ಸುತಗಟ್ಟಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಸ್ಥಳೀಯ ಗಣ್ಯರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 