ಆನೆ ದಂತ, ಚಿರತೆಯ ಉಗುರು ವಶ : ಆರು ಮಂದಿಯ ಬಂಧನ

ಶಿವಮೊಗ್ಗ, ಜ 25,ತೀರ್ಥಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಆನೆಯ ದಂತ ಮತ್ತು ಚಿರತೆಗಳ ಉಗುರುಗಳನ್ನು ವಶಪಡಿಸಿಕೊಂಡಿದ್ದು,  ಈ ಸಂಬಂಧ ಆರು ಜನರನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ನಲೂರು ಗ್ರಾಮದ ಮೇಲೆ ದಾಳಿ ನಡೆಸಿ ಆನೆಯ ದಂತವನ್ನು ವಶಕ್ಕೆ ತೆಗೆದುಕೊಂಡು, ಗ್ರಾಮ ನಿವಾಸಿ ರಾಜಗೋಪಾಲ ಮತ್ತು ನೆರತೂರು ಗ್ರಾಮದ ಕೃಷ್ಣಮೂರ್ತಿಯನ್ನು  ಬಂಧಿಸಲಾಗಿದೆ.ಸಾಗರ ತಾಲೂಕಿನ ತುಮುರಿ ಗ್ರಾಮದ ಮೇಲೂ  ದಾಳಿ ನಡೆಸಿ, 13 ಚಿರತೆಗಳ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗ್ರಾಮದ ದೇವರಾಜ್, ಉದಯ ಕುಮಾರ್, ಸುಧಾಕರ ಮತ್ತು ನವೀನ್ ಅವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.