ಗದಗ ನವೆಂಬರ್ 27 : ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೇ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಿರ್ವಹಿಸಬೇಕು. ಪರಿಷ್ಕರಣಾ ಕಾರ್ಯವನ್ನು ಪಾರದರ್ಶಕವಾಗಿ, ವ್ಯವಸ್ಥಿತವಾಗಿ ಜರುಗಿಸಿ ಅಂತಿಮ ಮತದಾರರ ಪಟ್ಟಿಯನ್ನು ತಯಾರಿಕೆಗೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ರಮಣದೀಪ ಚೌಧರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪರೀಶೀಲನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವೀಕೃತವಾದಂತಹ ಅರ್ಜಿಗಳಲ್ಲಿನ ಮರಣ ಹೊಂದಿದವರ, ಹೆಸರುಗಳ ತಿದ್ದುಪಡಿ, ವರ್ಗಾವಣೆಗೆ ಸಂಬಂಧಿಸಿದಂತೆ ಸಂಬಂಧಿತ ಅಧಿಕಾರಿಗಳು ಪರೀಶೀಲನೆ ನಡೆಸಿ ಅನುಮೋದನೆ ನೀಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ವಿಳಂಬಕ್ಕೆ ಆಸ್ಪದ ನೀಡದೇ ಜಾಗರೂಕತೆಯಿಂದ ವಿಲೇವಾರಿ ಮಾಡಲು ತಿಳಿಸಿದರು.
ಮತದಾರರ ಪಟ್ಟಿಯಿಂದ ಕೈ ಬಿಡುವ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಪರೀಶೀಲಿಸಿ ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿ ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಸೇರೆ್ಡಗೊಳಿಸುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿನ ವಿಕಲಚೇತನ ಮತದಾರರು, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಫಾರ್ಮ ನಂ. 6, ಫಾರ್ಮ ನಂ. 7, ಜಿಲ್ಲೆಯಲ್ಲಿನ ಮತಗಟ್ಟೆಗಳ ವಿವರ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪರಿಷ್ಕರಣಾ ಕಾರ್ಯದಲ್ಲಿ ಜವಾಬ್ದಾರಿಯಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಬಿ.ಎಲ್.ಓಗಳ ಸಭೆ ಜರುಗಿಸಬೇಕೆಂದರು.
ಮತದಾರರ ಪಟ್ಟಿಯಿಂದ ವಿವಿಧ ಕಾರಣಗಳಿಂದ ಹೆಸರುಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಕುರಿತು ಸಂಬಂಧಿತ ಅಧಿಕಾರಿಗಳು ಪುನರ್ ಪರೀಶೀಲನೆ ಕೈಗೊಂಡು ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ವ್ಯವಸ್ಥಿತವಾಗಿ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನಿರ್ದೆಶನ ನೀಡಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ ವಿವಿಧ ಕಾರಣಗಳಿಂದ ವಲಸೆ ಹೋಗಿರುವ , ನಿಧನ ಹೊಂದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯಲ್ಲಿ ಸಂಬಂಧಿತ ಅಧಿಕಾರಿಗಳು ಹೆಚ್ಚಿನ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 29-10-2024 ರವರೆಗೆ ಕರಡು ಮತದಾರರ ಪಟ್ಟಿಯ ಪ್ರಕಾರ 2,98,283 ಮತದಾರರಿದ್ದಾರೆ. ಆ ಪೈಕಿ 4,47,418 ಪುರುಷ ಮತದಾರರು, 4,50,865 ಮಹಿಳಾ ಮತದಾರರಿರುತ್ತಾರೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಫಾರ್ಮ ನಂ.6, ಫಾರ್ಮ ನಂ. 7, ಫಾರ್ಮ ನಂ. 8 ಕುರಿತು ಮಾಹಿತಿ ನೀಡಿದರು. ಕರಡು ಮತದಾರರ ಯಾದಿಗಳನ್ನು ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ www.ceokarnataka.kar.nic.in ನೇದ್ದರಲ್ಲಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.