ಪಶ್ಚಿಮ ಪದವೀಧರ ಮತ ಕ್ಷೇತ್ರ ಚುನಾವಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.71ರಷ್ಟು ಮತದಾನ
ಕಾರವಾರ.ಅ28 : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಬುಧುವಾರ ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.71.08 ಮತದಾನವಾಗಿದೆ.
ಜಿಲ್ಲೆಯಲ್ಲಿ ಒಟ್ಟು ಸ್ಥಾಪಿಸಲಾದಂತಹ 26 ಮತ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ ಶೇ.10.05ರಷ್ಟು ಮತದಾನವಾಗಿರುತ್ತು. ಮಧ್ಯಾಹ್ನ 12ಕ್ಕೆ ಶೇ.27.47ರಷ್ಟು, ಮಧ್ಯಾಹ್ನ 2 ಗಂಟೆಗೆ ಶೇ.48.12ರಷ್ಟು ಹಾಗೂ ಸಂಜೆ 4 ಗಂಟೆಗೆ ಶೇ.62.28ರಷ್ಟು ಮತದಾನವಾಗಿತ್ತು.
ಅಂತಿಮವಾಗಿ 5 ಗಂಟೆಗೆ 71.08ರಷ್ಟು ಮತದಾನವಾಗಿರುವುದಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಮಾಹಿತಿ
ನೀಡಿದರು.
ಮಂಚಿಕೇರಿಯ ಉಪ ತಹಶೀಲ್ದಾರ ಕಾರ್ಯಾಲಯದ ಮತಗಟ್ಟೆಯಲ್ಲಿ ಶೇ.82.67 ಮತದಾನವಾಗುವ ಮೂಲಕ ಜಿಲ್ಲೆಯಲ್ಲಿ ಅತಿಹೆಚ್ಚು ಮತದಾನವಾದ ಮತಗಟ್ಟೆಯಾಗಿರುತ್ತದೆ. ಇದೆರೀತಿ ಅಂಕೋಲಾದ ತಹಶೀಲ್ದಾರ ಕಚೇರಿಯ ಬಲಬಾಗದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಶೇ.59.37ರಷ್ಟು ಮತದಾನವಾಗಿದ್ದು, ಜಿಲ್ಲೆಯಲ್ಲಿ ಅತಿಕಡಿಮೆ ಮತದಾನವಾದ ಮತಗಟ್ಟೆಯಾಗಿರುತ್ತದೆ.
ಜಿಲ್ಲೆಯಲ್ಲಿ 7,113 ಪುರುಷ ಹಾಗೂ 6,034 ಮಹಿಳಾ ಮತ್ತು 1 ಇತರೆ ಮತದಾರರು ಸೇರಿದಂತೆ ಒಟ್ಟು 13,148 ಮತದಾರರಿದ್ದು, ಇದರಲ್ಲಿ 5,519 ಪುರುಷ, 3,826 ಮಹಿಳಾ ಮತ್ತು 1 ಇತರೆ ಮತದಾರರು ತಮ್ಮ ಮತ ಚಲಾಯಿಸುವ ಮೂಲಕ ಒಟ್ಟಾರೆ 9,346 ಮತದಾರರು ಮತ ಚಲಾಯಿಸಿರುತ್ತಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಬಂದ ಮತದಾರರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಣೆಗೆ ಕ್ರಮ ವಹಿಸುವುದರೊಂದಿಗೆ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಯಲ್ಲಾಪುರ ತಹಶೀಲ್ದಾರ ಕಚೇರಿ ಮತಗಟ್ಟೆ ಸಂಖ್ಯೆ:127 ಮತಗಟ್ಟೆಗೆ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮ, ಸಂಯೋಜನೆ ಹಾಗೂ ಸಾಂಖಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯಾದ ಶಾಲಿನಿ ರಜನೀಶ್ ಅವರು ಭೇಟಿ ನೀಡಿ ಮತದಾನ ಕಾರ್ಯ ಪರಿಶೀಲಿಸಿದರು. ಅದೇರೀತಿ ಜಿಲ್ಲಾಧಿಕಾರಿ ಹಾಗೂ ಪಶ್ವಿಮ ಪದವೀಧರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಹರೀಶ ಕುಮಾರ ಕೆ, ಅವರು ಕೂಡ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ಕಾರ್ಯವನ್ನು ಪರಿಶೀಲಿಸಿದರು.
ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಪದವೀಧರ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿತ್ತು.
***************