ಬ್ಯಾಡಗಿಯಲ್ಲಿ ಶ್ರದ್ಧಾಭಕ್ತಿಯಿಂದ ಈದ್ ಮಿಲಾದ್ ಆಚರಣೆ
Eid Milad celebrated with devotion in Byadgi
ಬ್ಯಾಡಗಿ 27; ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಬುಧವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಬೆಳಗ್ಗೆಯಿಂದಲೇ ಪಟ್ಟಣದ ಪ್ರಮುಖ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಚೋಮನ ಶಾ ವಲಿ ದರ್ಗಾದಿಂದ ಭವ್ಯ ಮೆರವಣಿಗೆ ಆರಂಭಗೊಂಡು ಕದರಮಂಡಲಗಿ ರಸ್ತೆ, ಸುಭಾಷ್ ಸರ್ಕಲ್, ಮುಖ್ಯರಸ್ತೆ, ಹಳೆ ಪುರಸಭೆ ಹಾಗೂ ಅಗಸನಹಳ್ಳಿ ಮಾರ್ಗವಾಗಿ ಸಾಗಿ ಮತ್ತೆ ಚೋಮನ ಶಾ ವಲಿ ದರ್ಗಾವನ್ನು ತಲುಪಿತು.
ಮೆರವಣಿಗೆ ಸುಭಾಷ್ ಸರ್ಕಲ್ ತಲುಪಿದ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಶಿವಣ್ಣನವರ್ ಮಾತನಾಡಿ, ಪ್ರವಾದಿ ಹಜರತ್ ಮಹಮ್ಮದ್ ಅವರ ಜೀವನಾದರ್ಶಗಳು ಶಾಂತಿ, ಸಹಬಾಳ್ವೆ, ಸಹೋದರತ್ವ ಹಾಗೂ ಮಾನವೀಯತೆಯ ಸಂದೇಶವನ್ನು ಸಾರುತ್ತವೆ. ಪ್ರತಿಯೊಬ್ಬರೂ ಈ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜದ ಎಲ್ಲ ಧರ್ಮಗಳ ಜನರು ಪರಸ್ಪರ ಗೌರವದಿಂದ ಹಾಗೂ ಸೌಹಾರ್ದಯುತವಾಗಿ ಬದುಕುವ ಮೂಲಕ ಶಾಂತಿ ಮತ್ತು ಅಭಿವೃದ್ಧಿಗೆ ಕೈಜೋಡಿಸಬೇಕು. ಎಲ್ಲರೂ ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಹಜರತ್ ಮಹಮ್ಮದ್ ಅವರ ಜೀವನ ಮತ್ತು ಬೋಧನೆಗಳು ಇಡೀ ಮಾನವ ಸಮಾಜಕ್ಕೆ ಶಾಂತಿ, ಪ್ರೀತಿ, ಸಹೋದರತ್ವ ಹಾಗೂ ಮಾನವೀಯತೆಯ ಸಂದೇಶ ನೀಡುತ್ತವೆ. ಸಮಾಜದಲ್ಲಿ ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಕಾಪಾಡಿಕೊಂಡು ಪರಸ್ಪರ ಗೌರವದಿಂದ ಬದುಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶಾಂತಿಯ ಪಟ್ಟಣವೆಂದರೆ ಅದು ನಮ್ಮ ಬಾದಗಿ ಎಂದು ಹೇಳಿದರು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಸಮಾಜದ ಬಾಂಧವರ ವತಿಯಿಂದ ಶರಬತ್, ತಂಪು ಪಾನೀಯ ಹಾಗೂ ಹಣ್ಣಿನ ರಸದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್ ಎಚ್., ತಾಲೂಕು ಅಧ್ಯಕ್ಷ ದಾನಪ್ಪ ಚೂರಿ, ಚನ್ನಬಸಪ್ಪ ಹುಲ್ಲತ್ತಿ, ಸಿಪಿಐ ಎಂ.ಬಿ. ಚಿಕ್ಕಣ್ಣನವರ್, ಪಿಎಸ್‌ಐ ಭಾರತಿ ಕುರಿ, ಸಮಾಜದ ಹಿರಿಯರಾದ ಡಾ. ಎ.ಎಂ. ಸೌಧಾಗರ್, ಅಂಜುಮನ್ ಸಮಿತಿ ಅಧ್ಯಕ್ಷ ಮುಕ್ತಿಯಾರ್ ಮುಲ್ಲಾ, ಮಂಜೂರ್ ಅಲಿ ಹಕೀಮ್, ಅಬ್ದುಲ್ ಮುನ್ನಾಫ್, ಯರೇಸಿಮಿ, ರಾಜೇಸಾಬ್ ಕಳ್ಯಾಳ, ಮಜೀದ್ ಮುಲ್ಲಾ, ಭಾಷಾ ಸಾಬ್ ಮುಲ್ಲಾ, ರಫೀಕ್ ಅಹ್ಮದ್ ಬೆಳಗಾಂ, ಮೆಹಬೂಬ್ ಅಗಸನಹಳ್ಳಿ, ನಜೀರ್ ಅಹ್ಮದ್ ಶೇಖ್, ಆರ್.ಜೆ. ಮುಲ್ಲಾ, ಅಜೀಜ್ ವಿಜಯಪುರ ಸೇರಿದಂತೆ ಸಮಾಜದ ಹಿರಿಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 