ಈದ್ ಮಿಲಾದ್ ಹಬ್ಬದ ಅಂಗವಾಗಿ ಭವ್ಯ ಮೆರವಣಿಗೆ

ಈದ್ ಮಿಲಾದ್ ಹಬ್ಬದ ಅಂಗವಾಗಿ ಭವ್ಯ ಮೆರವಣಿಗೆ Grand procession to mark the Eid Milad festival

 

ಬಳ್ಳಾರಿ 27: ನಗರದ ಕೌಲ್ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.  ಈದ್ ಮಿಲಾದ್ ಅಂಗವಾಗಿ ಕುಣಿಟಾನಿ ಮಸೀದಿಯಿಂದ ದಿವಾನ್ ಮಸ್ತಾನ್ ದರ್ಗಾವರೆಗೆ ಭವ್ಯ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು, ಮಕ್ಕಳು, ಯುವಕರು ಹಾಗೂ ಹಿರಿಯರು ಪಾಲ್ಗೊಂಡಿದ್ದರು. ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ, ನಾತ್ ಶರೀಫ್ ಪಠಿಸುತ್ತಾ ಪ್ರವಾದಿ ಮಹಮ್ಮದ್ (ಸ) ಅವರ ಮೇಲಿನ ಭಕ್ತಿ ಹಾಗೂ ಗೌರವವನ್ನು ವ್ಯಕ್ತಪಡಿಸಿದರು.  

ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಹಾಗೂ ಭಾಗವಹಿಸಿದ್ದವರಿಗೆ ಊಟ, ಫಲಾಹಾರ ಮತ್ತು ಜ್ಯೂಸ್ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆ ಜನರು ಮೆರವಣಿಗೆಯನ್ನು ವೀಕ್ಷಿಸಿ, ಪರಸ್ಪರ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.  

ಸಮುದಾಯದ ಮುಖಂಡರು, ಯುವಕರು ಹಾಗೂ ಹಿರಿಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡು ಶಾಂತಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯತೆಯ ಸಂದೇಶದೊಂದಿಗೆ ಹಬ್ಬವನ್ನು ಆಚರಿಸಿದರು.  

ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್‌ ಕೈಗೊಂಡಿತ್ತು. ಮೆರವಣಿಗೆ ಸಾಗಿದ ಪ್ರಮುಖ ಮಾರ್ಗಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಸಂಚಾರ ಹಾಗೂ ಭದ್ರತೆಯ ಮೇಲೆ ನಿಗಾ ವಹಿಸಲಾಗಿತ್ತು. ಪೊಲೀಸರ ಮುನ್ನೆಚ್ಚರಿಕಾ ಕ್ರಮಗಳಿಂದ ಭವ್ಯ ಮೆರವಣಿಗೆಯು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆಯಿತು.