ಬೆಳಗಾವಿ 16: ಜಗತ್ತಿನ ಜ್ಞಾನ ಇಂದು ಬೆರಳ ತುದಿಯಲ್ಲಿಯೇ ದೊರೆಯುತ್ತಿದ್ದು, ಸಂಸ್ಕಾರ ದೊರೆಯುವುದು ಅಪರೂಪವಾಗಿದೆ. ವ್ಯಕ್ತಿಗೆ ಕೇವಲ ಜ್ಞಾನ ನೀಡುವುದು ಶಿಕ್ಷಣವಲ್ಲ. ಅವನನ್ನು ಸುಸಂಸ್ಕೃತ ರನ್ನಾಗಿಸುವುದು ನಿಜವಾದ ಶಿಕ್ಷಣ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಇಂದು ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಂದುವರೆದು ಮಾತನಾಡಿದ ಅವರು ಪಾಲಕರು ಮಕ್ಕಳನ್ನು ಮೊಬೈಲ್ ಗಳಿಂದ ದೂರವಿಟ್ಟು ಗ್ರಂಥಾಲಯಗಳ ಸಮೀಪ ತರಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗುರುಬಸವರಾಜ ಮಾತನಾಡಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಮಕ್ಕಳನ್ನು ಕಳುಹಿಸುವುದೆಂದರೆ ಯುದ್ದಕ್ಕೆ ಕಳಿಸುತ್ತಿರುವಂತೆ ಪಾಲಕರು ಆತಂಕಗೊಂಡಿರುತ್ತಾರೆ. ಪಾಲಕರು ಮೊದಲು ಭಯದಿಂದ ಹೊರಬಂದು ಮಕ್ಕಳನ್ನು ಮಕ್ಕಳನ್ನಾಗಿ ಇರಲು ಬಿಡಬೇಕು. ಅವರ ಮೇಲೆ ಯಾವುದೇ ರೀತಿಯ ಒತ್ತಡ ಹಾಕಬಾರದು. ಅಂಕಗಳಿಂದ ಅವರ ಸಾಧನೆ ಅಳೆಯಬಾರದು ಎಂದರು.
ಇನ್ನೋರ್ವ ಅತಿಥಿ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನ್ಯಾಯವಾದಿ ಬಸವರಾಜ ರೊಟ್ಟಿ ಮಾತನಾಡಿ ನಾಡಿನ ಬಡಮಕ್ಕಳ ಏಳಿಗಾಗಿ ಶ್ರಮಿಸಿದ ಶಿವಬಸವ ಮಹಾಸ್ವಾಮಿಗಳು ನಡೆದಾಡಿದ ಈ ನೆಲ ಪುಣ್ಯ ಭೂಮಿ. ಇಲ್ಲಿ ಅಧ್ಯಯನ ಮಾಡಿದವರು ಖಂಡಿತವಾಗಿ ಸಾಧಕರಾಗುತ್ತಾರೆ ಎಂದರು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಪ್ರಾಚಾರ್ಯೆ ಪ್ರೇಮಲತಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸಂಗೀತಾ ಬುರ್ಲಿ ಸ್ವಾಗತಿಸಿದರು. ವೀಣಾ ಮತ್ತು ರೋಹಿಣಿ ನಿರೂಪಿಸಿದರು. ಪೂಜಾ ಗಾಣಿಗೇರ ವಂದಿಸಿದರು