ಆರ್ಥಿಕ ಸಮಾನತೆಗೆ ಶಿಕ್ಷಣವೇ ಅಡಿಗಲ್ಲು: ಶ್ರೀನಿವಾಸ್ ಕಾಕಿ
Education is the cornerstone of economic equality: Srinivas Kaki
ರಾಣೆಬೆನ್ನೂರು, ಜು.28: ಆರ್ಥಿಕ ಸಮಾನತೆ ಸಾಧಿಸಲು ಸಮಾಜದ ಪ್ರತಿಯೊಬ್ಬ ಮಗುವೂ ವಿದ್ಯಾವಂತರಾಗಬೇಕು ಎಂದು ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ಕಾಕಿ ಹೇಳಿದರು.
ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಪಟ್ಟಶಾಲಿ-ನೇಕರ ಸಮಾಜ ನೌಕರರ ಸಂಘದ ವತಿಯಿಂದ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಮಾಜದ ಯುವಕರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಆರಿಸಿಕೊಳ್ಳುತ್ತಿರುವುದರಿಂದ ಸಾಂಪ್ರದಾಯಿಕ ಕುಲವೃತ್ತಿಯಾದ ನೇಕರಿಕೆ ಕ್ರಮೇಣ ಮರೆಯಾಗುತ್ತಿದೆ.
ಆದರೂ ಶಿಕ್ಷಣದ ಜೊತೆಗೆ ಕುಲವೃತ್ತಿಯ ಉಳಿವು ಹಾಗೂ ಅಭಿವೃದ್ಧಿಗೂ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಆಯೋಜಿಸುವ ಉದ್ದೇಶವಿದ್ದು, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗೋಪಾಲ ಎನ್. ಗುಟ್ಟಲ ಮಾತನಾಡಿ, ದಿವಂಗತ ಡಾ. ಎಚ್.ಕೆ. ಕದರಮಂಡಲಗಿ ಅವರು ಸುಮಾರು 14 ವರ್ಷಗಳ ಹಿಂದೆ ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಆರಂಭಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯವೆಂದರು.
ಕಾಕಿ ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ರೂಪಾ ಕಾಕಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಸಿ ಪುರಸಭೆಯ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, ಪ್ರೆಸ್ ಗ್ರೀನ್ ಆಗ್ರೋ ಟೆಕ್ ವ್ಯವಸ್ಥಾಪಕ ನಿರ್ದೇಶಕ ಕರಬಸಪ್ಪ ಜಾಡರ, ನಿವೃತ್ತ ಶಿಕ್ಷಕಿ ವಿದ್ಯಾ ಹಮ್ಮಿಗಿ, ಕರಬಸಮ್ಮ ಬುಳ್ಳಾಪುರ, ರಮೇಶ್ ಗುಟ್ಟಲ, ಗಾಯತ್ರಿ ಉಜ್ಜಪ್ಪನಹಳ್ಳಿ, ವನಜಾಕ್ಷಮ್ಮ ವಿಭೂತಿ, ಪ್ರಭು ಚಿನ್ನಿಕಟ್ಟಿ ಸೇರಿದಂತೆ ಹಲವರು ಮಾತನಾಡಿದರು.
ವೇದಿಕೆಯಲ್ಲಿ ಚಂದ್ರಣ್ಣ ನಾಯಮತಿ, ಚನ್ನಬಸಪ್ಪ ಜಾಡರ, ಬಸವರಾಜ ಹಿಂಡಸಗೇರಿ, ಪಿ.ಕೆ. ಕದರಮಂಡಲಗಿ, ರಾಜು ಚನ್ನಗಿರಿ, ರೇಖಾ ಚಿನ್ನಿಕಟ್ಟಿ, ಶ್ರೀನಿವಾಸ ಸುರಹುಣ್ಣಿ, ಭೋಜರಾಜ ಕಥಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಸಮಾಜದ 75ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ನೀಡಿ ಗೌರವಿಸಲಾಯಿತು. ಸಿರಿ ಬ್ಯಾಡಗಿ ಮತ್ತು ಧನ್ಯಾ ಮಾಸೂರ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ತಿಪ್ಪೇಸ್ವಾಮಿ ಹಳ್ಳದದಂಡಿ ಸ್ವಾಗತಿಸಿದರು. ಶ್ರೀನಿವಾಸ್ ಮಾಗಳ ನಿರೂಪಿಸಿ, ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 