‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಆಶಯದ ಕಲಾಕೃತಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೆಚ್ಚಿಗೆ

ಚಿತ್ರ ಕಲಾಕೃತಿಗಳ ಪ್ರದರ್ಶನದ ಉದ್ಘಾಟನೆ 

ಧಾರವಾಡ 16: ಶೈಕ್ಷಣಿಕ ಬಲವರ್ಧನೆ ವರ್ಷ 2024-25ನೆಯ ಶೈಕ್ಷಣಿಕ ವರ್ಷದ ಅಂಗವಾಗಿ 'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಎಂಬ ಪ್ರಧಾನ ಆಶಯದ ಅಡಿಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ವಿಕಾಸಕ್ಕೆ ಸಂಬಂಧಿಸಿದಂತೆ 50 ಜನ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ರಚಿಸಿರುವ ನೂರಕ್ಕೂ ಹೆಚ್ಚು ಚಿತ್ರಕಲಾ ಕೃತಿಗಳ ಪ್ರದರ್ಶನವನ್ನು ಇಲ್ಲಿಯ ಶಿಕ್ಷಕಿಯರ ಸರ್ಕಾರಿ ತರಬೇತಿ ವಿದ್ಯಾಲಯ(ಟಿಸಿಡಬ್ಲ್ಯೂ)ದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಮಂಗಳವಾರ ಉದ್ಘಾಟಿಸಿದರು.  

ಇತ್ತೀಚಿಗೆ ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ನಗರದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಐದು ದಿನಗಳ ಚಿತ್ರಕಲಾ ಶಿಕ್ಷಕರ ವಿಶೇಷ ಶಿಬಿರದಲ್ಲಿ ಈ ಕಲಾಕೃತಿಗಳನ್ನು ರಚಿಸಲಾಗಿತ್ತು. 

ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ, ಗದಗ, ಚಿಕ್ಕೋಡಿ ಮತ್ತು ಶಿರಸಿ ಜಿಲ್ಲೆಗಳ ಆಯ್ದ 50 ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮದೇ ಆದ ವಿಭಿನ್ನ ಪರಿಕಲ್ಪನೆಗಳಲ್ಲಿ ರಚಿಸಿರುವ ಚಿತ್ರಕಲಾ ಕೃತಿಗಳನ್ನು ಅವಲೋಕನ ಮಾಡಿದ ಮಧು ಬಂಗಾರ​‍್ಪ ಅವರು, ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳ ಅಳವಡಿಕೆ ಇರಬೇಕೆನ್ನುವ ವಿಶಿಷ್ಟ ಪರಿಕಲ್ಪನೆಗಳು ಬಹುಪಾಲು ಚಿತ್ರಕಲಾ ಕೃತಿಗಳಲ್ಲಿ ಅಭಿವ್ಯಕ್ತಗೊಂಡಿರುವುದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. 

ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ, ಜಂಟಿ ನಿರ್ದೇಶಕ ಈಶ್ವರ ನಾಯಕ, ಧಾರವಾಡ ಡಿಡಿಪಿಐ ಎಸ್‌. ಎಸ್‌. ಕೆಳದಿಮಠ,  ಹಾವೇರಿ ಡಯಟ್ ಪ್ರಾಚಾರ್ಯ ಗೀರೀಶ ಪದಕಿ,  ಆಯುಕ್ತರ ಕಚೇರಿಯ ಚಿತ್ರಕಲಾ ವಿಷಯ ಪರೀವೀಕ್ಷಕ ಪಿ.ಆರ್‌. ಬಾರಕೇರ, ಟಿ.ಸಿ.ಡಬ್ಲ್ಯೂ. ಪ್ರಾಚಾರ್ಯ ರವಿಕುಮಾರ ಬಾರಾಟಕ್ಕೆ, ಇಲಾಖಾ ಅಧಿಕಾರಿಗಳಾದ ಉಮೇಶ್ ಬೊಮ್ಮಕ್ಕನವರ, ಅಶೋಕಕುಮಾರ ಸಿಂದಗಿ, ಎಸ್‌.ಎಂ. ಹುಡೇದಮನಿ, ರೇಣುಕಾ ಅಮಲಝರಿ ಸೇರಿದಂತೆ ಇತರರು ಇದ್ದರು.