ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು,ಮಾರ್ಚ್.7, ಇಂದು ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ನಗರದ ಕೆಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ರಸಾಯನಶಾಸ್ತ್ರ, ಬಿಸಿನೆಸ್ ಸ್ಡಡೀಸ್ ಹಾಗೂ ಸಮಾಜಶಾಸ್ತ್ರ ದ್ವಿತೀಯ ಪಿಯುಸಿ ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಆರಂಭವಾಗಿದ್ದು, ಪರೀಕ್ಷೆ ನಡೆಯುತ್ತಿರುವ ಹಿನ್ನಲೆ ನಗರದ ವಿವಿಧ ಕಾಲೇಜುಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿಗೆ ಭೇಟಿ ನೀಡಿದ ಸಚಿವರು, ಪರೀಕ್ಷಾ ಕೊಠಡಿಗಳಿಗೆ ತೆರಳಿ ಮೇಲ್ವಿಚಾರಣೆ ನಡೆಸಿದರು.

ಪರೀಕ್ಷೆ ಬರೆಯುತ್ತಿದ್ದ ಅಂಧ ವಿದ್ಯಾರ್ಥಿಗಳ ಜೊತೆ ಸಚಿವರು ಮಾತುಕತೆ ನಡೆಸಿದರು. ಇದೇ ವೇಳೆ ಪರೀಕ್ಷಾ ಕೇಂದ್ರದ ಪಕ್ಕದಲ್ಲಿ ವಾಲಗದ ಸದ್ದು ಬರುತ್ತಿದ್ದ ಸುದ್ದಿ ತಿಳಿದ ಸಚಿವರು, ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ವಾಲಗದ ಶಬ್ದ ಬಂದ್ ಮಾಡಿಸಿದರು.  ರಾಜ್ಯದ ಎಲ್ಲ ಕಡೆ ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದು, ಯಾವುದೇ ಅಹಿತಕರವಾದ ಘಟನೆಯಾಗಿಲ್ಲದಿರುವ ಬಗ್ಗೆ ಮಾಹಿತಿ ನೀಡಿದರು. ಇಡೀ ಪರೀಕ್ಷಾ ಅವಧಿಯಲ್ಲಿ ಗರಿಷ್ಟ  ಸಂಖ್ಯೆಯ ವಿದ್ಯಾರ್ಥಿಗಳು (ಸುಮಾರು ಆರು ಲಕ್ಷ) ಪರೀಕ್ಷೆ ಎದುರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ತಜ್ಞರಾದ ದಿ.ಹೆಚ್ಚೆನ್ ಅವರು ಬಳಸುತ್ತಿದ್ದ ಕೊಠಡಿಗೆ ಭೇಟಿ ನೀಡಿದ ಸಚಿವರು ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟವನ್ನು ನೆನೆದರು.

ದ್ವೀತಿಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮೊದಲ ದಿನವೇ ಹರಿದಾಡಿದ ವಿಚಾರದ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಭೌತಶಾಸ್ತ್ರ ಪರೀಕ್ಷೆ ದಿನ ಮೊಬೈಲ್ ಮೂಲಕ ದುಷ್ಕರ್ಮಿಗಳು ಪ್ರಶ್ನೆ ಪತ್ರಿಕೆ ಹರಿ ಬಿಟ್ಟಿದ್ದರು. ಅಂದು ಇದ್ದ ಮೇಲ್ವಿಚಾರಕರನ್ನು ಅಮಾನತು ಮಾಡಲು ಸೂಚನೆ ನೀಡಲಾಗಿದೆ ಎಂದು ಎಚ್ಚರಿಸಿದರು.  ಪರೀಕ್ಷಾ ಕೇಂದ್ರದಲ್ಲಿ ಯಾರಾದರೂ ಅನಧಿಕೃತವಾಗಿ ಓಡಾಡುವುದನ್ನು ನಿರ್ಬಂಧಿಸಲಾಗಿದೆ. ಈಗಾಗಲೇ ಈ ವಿಚಾರವಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಜೊತೆ ಚರ್ಚಿಸಲಾಗಿದ್ದು, ಮಾರ್ಚ್.4ರಂದು ಇಂಡಿಯಲ್ಲಿ ನಡೆದ ಪ್ರಕರಣ ಪುನರಾವರ್ತನೆಯಾಗುವುದಿಲ್ಲ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ 200 ಮೀಟರ್  ವ್ಯಾಪ್ತಿಯಲ್ಲಿ ಅನಧಿಕೃತ ವ್ಯಕ್ತಿಗಳಿಗೆ ನಿರ್ಬಂಧ ಹೇರಲಾಗಿದ್ದು, ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.