ಭೀಕರ ಗಾಳಿ ಮಳೆಗೆ 100 ವರ್ಷದ ಜೋಡಿ ಮರಗಳು ಮನೆ ಮೇಲೆ ಬಿದ್ದು ಮನೆ ಸಂಪೂರ್ಣ ನೆಲ ಸಮ: ಸಹಾಯಕ್ಕಾಗಿ ಪ್ರಸ್ತಾವನೆ
Due to heavy winds and rain, a pair of 100-year-old trees fell on a house, completely leveling it: R
ಲೋಕದರ್ಶನ ವರದಿ
ಗದಗ 19: "ಬಡವನ ಸಿಟ್ಟಿಗೆ ಜಗದ ಕಣ್ಣು ಕೆಂಪು ಎನ್ನುತ್ತಾರೆ. ಆದರೆ ಇಲ್ಲಿ ಪ್ರಕೃತಿಯ ಮುನಿಸಿಗೆ ಬಡವನ ಇಡೀ ಬದುಕೇ ಕರಗಿ ಹೋಗಿದೆ! ಕೇವಲ ಮರ ತೆರವುಗೊಳಿಸಿದರೆ ಬಡವನ ಹೊಟ್ಟೆ ತುಂಬುತ್ತದೆಯೇ? ಕೋಮು ಸೌಹಾರ್ದತೆಯ ಸಂಕೇತವಾಗಿ ಹೆಮ್ಮರವನ್ನು ಸಾಕಿ ಬೆಳೆಸಿದ ನಾಸೀರುದ್ದಿನ್ ಮುಲ್ಲಾ ಕುಟುಂಬದ ಪುಣ್ಯ ಜೀವಿಗೆ ತಕ್ಷಣವೇ ಹೊಸ ಸೂರಿನಾಶ್ರಯ ಕಲ್ಪಿಸಬೆಕೇಂದು ಗದಗಿನ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ಸರ್ಕಾರಕ್ಕೆ ತೀವ್ರ ಒತ್ತಾಯ ವ್ಯಕ್ತಪಡಿಸಿದ್ದಾರೆ. ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನದ ಹಿಂಭಾಗದ ಖಾನ ತೋಟರೋಡ್ ಮಧ್ಯದಲ್ಲಿದ್ದ ನೂರು ವರ್ಷ ಹಳೆಯದಾದ ಬೃಹತ್ ಮರವು ಭೀಕರ ಗಾಳಿ ಮಳೆಗೆ ಧರೆಗುರುಳಿದೆ.
ದುರದೃಷ್ಟವಶಾತ್, ಈ ಹೆಮ್ಮರವು ಸ್ಥಳೀಯ ಅತ್ಯಂತ ನಿರ್ಗತಿಕ ಕುಟುಂಬದವರಾದ ನಾಸೀರುದ್ದಿನ್ ಮುಲ್ಲಾ ಅವರ ಮನೆಯ ಮೇಲೆಯೇ ಉರುಳಿ ಬಿದ್ದಿದೆ.ಇದರ ಭೀಕರತೆಗೆಇಡೀ ಮನೆ ಸಂಪೂರ್ಣ ಜಖಂಗೊಂಡಿದೆ. ಘಟನೆಯಿಂದ ಅಕ್ಕಪಕ್ಕದ ಇನ್ನೂ ನಾಲ್ಕೈದು ಮನೆಗಳಿಗೂ ಸಣ್ಣ ಪುಟ್ಟ ಹಾನಿಯಾಗಿದೆ
.*ಭಾವನಾತ್ಮಕ ಹಿನ್ನೆಲೆ - ಕೋಮು ಸೌಹಾರ್ದತೆಯ ಸಾಕ್ಷಿ:*ಇಲ್ಲಿನ ಅತ್ಯಂತ ಹೃದಯ ಸ್ಪರ್ಶಿ ಮತ್ತು ವಿಶೇಷ ವಿಚಾರವೆಂದರೆ, ನಾಸೀರುದ್ದಿನ್ ಮುಲ್ಲಾ ಅವರು ಮುಸ್ಲಿಂ ಸಮುದಾಯದವರಾಗಿದ್ದರೂ, ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪೂಜಿಸಲ್ಪಡುವ ಆಲ ಮತ್ತು ಬೇವಿನ ಜಂಟಿ ಮರವನ್ನು ತಲೆಮಾರುಗಳಿಂದ ತಮ್ಮ ಸ್ವಂತ ಮಗುವಿನಂತೆ ಪ್ರೀತಿಯಿಂದ ಪೋಷಿಸಿಕೊಂಡು ಬಂದಿದ್ದರು. ನಮ್ಮ ನಾಡಿನ ಕೋಮು ಸೌಹಾರ್ದತೆಗೆ ಮತ್ತು ಪ್ರಕೃತಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದ್ದ ಆ ಜಂಟಿ ಹೆಮ್ಮರವು ಸತತ್ ಭೀಕರ ಗಾಳಿ ಮಳೆಯಿಂದ ಇಂದು ಬಡವನ ಆಸರೆಯನ್ನೇ ಕಿತ್ತುಕೊಂಡಿರುವುದು ಇಡೀ ಗದಗ ನಗರದ ಜನತೆಯ ಕರುಳು ಹಿಂಡುವಂತೆ ಮಾಡಿದೆ.
ಅಧಿಕಾರಿಗಳ ನಡೆಗೆ ಕೃತಜ್ಞತೆ - ಪರಿಹಾರದ ಮೌನಕ್ಕೆ ಆಕ್ಷೇಪ: ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾದ ರಾಜಾರಾಮ್ ಹಾಗೂ ಲಕ್ಷ್ಮಣ ಜೋಗದಂಡಕರ್ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರೀಶೀಲಿಸಿ, ಮರವನ್ನು ತೆರವುಗೊಳಿಸಲು ಮಾಸ್ಟರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಈ ತಕ್ಷಣದ ಕರ್ತವ್ಯ ಪ್ರಜ್ಞೆಗೆ ಕೃಷ್ಣಾ ಎಚ್ ಹಡಪದ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಆದರೆ ದುರಂತ ನಡೆದು ಇಷ್ಟು ಸಮಯ ಕಳೆದರೂ ಸಂತ್ರಸ್ತ ಕುಟುಂಬಕ್ಕೆ ನೀಡಬೇಕಾದ ಪರಿಹಾರ ಅಥವಾ ಪುನರ್ವಸತಿಯ ಕುರಿತು ಸರಕಾರಿ ಅಧಿಕಾರಿಗಳು ತುಟಿ ಬಿಚ್ಚದಿರುವುದು ಅತ್ಯಂತ ಖೇದಕರ ಸಂಗತಿ ಎಂದು ಅವರು ಆಕ್ಷೇಪಿಸಿದ್ದಾರೆ. ಮೂರೂ ಇಲಾಖೆಗಳು ಮನಸ್ಸು ಮಾಡಿದರೆ ಅಸಾಧ್ಯವಾದುದೇನೂ ಇಲ್ಲ! (ಕ್ರಾಂತಿಕಾರಿ ಮಾರ್ಗೋಪಾಯ): ಈ ದಯನೀಯ ಸ್ಥಿತಿಯಲ್ಲಿ ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ಕೃಷ್ಣಾ ಎಚ್ ಹಡಪದಅವರು ಸರ್ಕಾರ ಹಾಗೂ ಜಿಲ್ಲಾಡಳಿತದ ಮುಂದೆ ಅತ್ಯಂತ ವ್ಯವಸ್ಥಿತವಾದ ತ್ರಿಮುಖ ಪರಿಹಾರದ ಮಾರ್ಗವನ್ನು ಪ್ರಸ್ತಾಪಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಭಿವೃದ್ಧಿ ನಿಧಿ: ಗದಗ ಜಿಲ್ಲಾಧಿಕಾರಿಗಳು ಮಾನವೀಯತೆಯ ಆಧಾರದ ಮೇಲೆ ತಕ್ಷಣವೇ ಸ್ಪಂದಿಸಿ, ತಮ್ಮ ವಿಶೇಷ ’ಜಿಲ್ಲಾ ಅಭಿವೃದ್ಧಿ ನಿಧಿ’ಯಿಂದ ತುರ್ತು ಧನಸಹಾಯ ಘೋಷಿಸಬೇಕು. ಸಚಿವರ ವಿಶೇಷ ಅನುದಾನ: ಗದಗ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿ, ’ವಿಶೇಷ ಅನುದಾನ’ದ ಕ್ರೋಢೀಕರಣವನ್ನು ಈ ಕುಟುಂಬದ ಹೊಸ ಮನೆ ನಿರ್ಮಾಣಕ್ಕೆ ಜೋಡಿಸಬೇಕು.
ನಗರಸಭೆಯ ವಿಶೇಷ ಕಾಳಜಿ ನಿಧಿ: ಸ್ಥಳೀಯ ಸಂಸ್ಥೆಯಾದ ನಗರಸಭೆಯುತನ್ನ ’ವಿಶೇಷ ಕಾಳಜಿ ನಿಧಿ’ ಅಥವಾತುರ್ತುಅನುದಾನವನ್ನುಇದಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು."ಈ ಮೂರೂ ಇಲಾಖೆಗಳ ಆಡಳಿತಾತ್ಮಕ ಶಕ್ತಿಗಳು ಕೇವಲ ಕಾಗದದ ನಿಯಮಗಳಿಗೆ ಸಿಲುಕದೆ, ಜಂಟಿಯಾಗಿ ಮನಸ್ಸು ಮಾಡಿದರೆ ನಾಸೀರುದ್ದಿನ್ ಮುಲ್ಲಾ ಅವರ ಕುಟುಂಬಕ್ಕೆ ಸಂಪೂರ್ಣವಾಗಿ ಹೊಸ ಸುಸಜ್ಜಿತ ಮನೆಯನ್ನು ನಿರ್ಮಿಸಿ ಕೊಡುವುದು ಕ್ಷಣದ ಕೆಲಸ.
ಇದರೊಂದಿಗೆ ಅಕ್ಕಪಕ್ಕದ ಹಾನಿಗೊಳಗಾದ ಮನೆಗಳ ದುರಸ್ತಿಗೂ ಆರ್ಥಿಕ ನೆರವು ನೀಡಬೇಕು. ಸೌಹಾರ್ದತೆಯ ಹೆಮ್ಮರ ಸಲಹಿದ ಬಡ ಕುಟುಂಬದ ಕಣ್ಣೀರು ಒರೆಸದಿದ್ದರೆ ಸರ್ಕಾರಿ ವ್ಯವಸ್ಥೆಗೆ ಬೆಲೆ ಎಲ್ಲಿದೆ? ಬಡವರ ಕಣ್ಣೀರು ಒರೆಸುವುದೇ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯ ಮುಖ್ಯ ಧೇಯವಾಗಿದೆ. ಆದ್ದರಿಂದ ಗದಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಗರ ಸಭೆ ತಕ್ಷಣವೇ ಈ ತ್ರಿವೇಣಿ ನಿಧಿಗಳ ಈ ಜಂಟಿ ಅನುದಾನದ ಕ್ರಿಯಾ ಯೋಜನೆಯನ್ನು ರೂಪಿಸಿ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಗದಗಿನ ಪ್ರಖ್ಯಾತ ಸಾಮಾಜಿಕಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ಗದಗ ಜಿಲ್ಲಾಧಿಕಾರಿಗಳಿಗೆ. ಗದಗ ಜಿಲ್ಲಾಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ ಅವರಿಗೆ. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ.ಅತ್ಯಂತ ನಮ್ರತೆಯಿಂದ ಹಾಗೂ ಬಲವಾಗಿ ವಿನಂತಿಸಿ ಒತ್ತಾಯಿಸಿದ್ದಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 