ಶಾಲೆಗಳಲ್ಲಿ ಡ್ರಗ್ಸ್‌ ಹಾವಳಿ-ಎಚ್ಚರಿಕೆ ಅಗತ್ಯ: ಸಚಿವ ಸತೀಶ ಜಾರಕಿಹೊಳಿ

ಶಾಲೆಗಳಲ್ಲಿ ಡ್ರಗ್ಸ್‌ ಹಾವಳಿ-ಎಚ್ಚರಿಕೆ ಅಗತ್ಯ: ಸಚಿವ ಸತೀಶ ಜಾರಕಿಹೊಳಿ Drug menace in schools - caution needed: Minister Satish Jarkiholi

ಬೆಳಗಾವಿ 28: ಮಾದಕ ವಸ್ತುಗಳ ವ್ಯಸನ ಬಹುದೊಡ್ಡ ಸಮಸ್ಯೆಯಾಗಿ ಇಡೀ ದೇಶವನ್ನು ವ್ಯಾಪಿಸಿದೆ. ನಮ್ಮ ಯುವಶಕ್ತಿಯನ್ನು ಕಸಿಯುತ್ತಿರುವ ಈ ವ್ಯಸನ ಶಾಲೆಗಳನ್ನೂ ಆಕ್ರಮಿಸಿಕೊಂಡಿರುವುದು ಕಳವಳದ ವಿಷಯ ಎಂದು ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಸತೀಶ ಜಾರಕಿಹೋಳಿ ಹೇಳಿದರು.  

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ.28ರಂದು ಬೆಳಗಾವಿ ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಸಂಘ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್‌ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಭಾರತ ಹಿ ಶ್ರೇಷ್ಠ ಭಾರತ-ಯುವ ಶುದ್ಧಿ ಅಭಿಯಾನ ಹಾಗೂ ನಶಾಮುಕ್ತ ಭಾರತ, ನಶಾಮುಕ್ತ ಕರ್ನಾಟಕ, ನಶಾಮುಕ್ತ ಕ್ಯಾಂಪಸ್ ಮತ್ತು ಅಂಗದಾನ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. 

ಗೊತ್ತೇ ಆಗದಂತೆ ನಶಾ ಪದಾರ್ಥಗಳು ಮಕ್ಕಳು ತಿನ್ನುವ ತಿಂಡಿಗಳಲ್ಲಿ ಸೇರೆ​‍್ಡಯಾಗುತ್ತಿದೆ. ಮಕ್ಕಳಿಗೆ ಚಟವಾಗಲಿ ಎನ್ನುವ ಕಾರಣಕ್ಕೆ ಮಾದಕ ಅಂಶವಿರುವ ಪದಾರ್ಥಗಳನ್ನು ತಿಂಡಿಗಳಲ್ಲಿ ಬೆರೆಸಲಾಗುತ್ತಿದೆ. ಹೀಗಾಗಿ ಪೋಷಕರು, ಶಿಕ್ಷಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದರು. 

ನಶಾಮುಕ್ತ ಕರ್ನಾಟಕ ನಿರ್ಮಾಣ ಕೇವಲ ಸರ್ಕಾರದ ಕೆಲಸವಲ್ಲ, ನಿಮ್ಮೆಲ್ಲರ ಭಾಗವಹಿಸುವಿಕೆ, ಜಾಗೃತಿ ಮತ್ತು ದೃಢ ಸಂಕಲ್ಪದಿಂದ ಮಾತ್ರ ಸಂಪೂರ್ಣ ನಶಾಮುಕ್ತ ಕರ್ನಾಟಕ ಸಾಧ್ಯ. ಈ ಕೆಲಸ ಮೊದಲು ಮನೆಯಿಂದ ಆರಂಭವಾಗಬೇಕು. ಕಾಲೇಜುಗಳಲ್ಲಿ, ಸ್ನೇಹಿತರಲ್ಲಿ, ಬಂಧುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು. 

ಕರ್ನಾಟಕವನ್ನು ನಶಾಮುಕ್ತ ಮಾಡಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ತೆಗೆದುಕೊಂಡಿರುವ ಈ ಹೆಜ್ಜೆ ಬಹಳ ಅರ್ಥಪೂರ್ಣವಾದುದು. ಇಂತಹ ಗಂಭೀರ ಪ್ರಯತ್ನಗಳಿಂದ ಮಾತ್ರ ಇಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ನಿಮ್ಮ ಈ ಅಭಿಯಾನಕ್ಕೆ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಎಲ್ಲರೂ ಒಟ್ಟಾಗಿ ಸ್ವಸ್ಥ ಕರ್ನಾಟಕ ಕಟ್ಟೋಣ. ನಮ್ಮ ವಿದ್ಯಾರ್ಥಿಗಳನ್ನು, ಮಕ್ಕಳನ್ನು ಆರೋಗ್ಯಪೂರ್ಣ ಹಾಗೂ ಸ್ವಸ್ಥ ನಾಗರಿಕರನ್ನಾಗಿ ಬೆಳೆಸೋಣ ಎಂದು ಅವರು ಕರೆ ನೀಡಿದರು. 

ಶಾಸಕ ಆಸೀಫ್ (ರಾಜು) ಸೇಠ್ ಅಧ್ಯಕ್ಷತೆ ವಹಿಸಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು. ದಿಶಾಬೋಧ್ ಫೌಂಡೇಶನ್‌ನ ಕಾಂತಿ ಶೆಟ್ಟಿ ಮಾತನಾಡಿದರು. ನಾರ್ಕೋಟಿಕ್ಸ್‌ ಕಂಟ್ರೋಲ್ ಬ್ಯೂರೋದ ವಿಕಾಸ್ ಸಿಂಗ್, ದಿಶಾಬೋಧ್ ಫೌಂಡೇಶನ್‌ನ ಎ.ಡಿ. ಧ್ರುವಕುಮಾರ್, ಡಾ. ಸಂದೀಪ್ ಪಟ್ಟಣಶೆಟ್ಟಿ, ಡಾ. ವಿಜಯಕುಮಾರ ಲಮಾಣಿ, ಜಿ.ಪಂ. ಅಧಿಕಾರಿ ರಾಹುಲ್ ಶಿಂದೆ, ಆರೋಗ್ಯಾಧಿಕಾರಿ ಡಾ. ಈಶ್ವರ್ ಗಡಾದ್, ಉಪ ಓಷಧ ನಿಯಂತ್ರಕ ಡಾ. ನಾಗರಾಜ್ ಎಸ್‌., ಎಸ್‌.ಪಿ. ಕೆ. ರಾಮರಾಜನ್, ಬಿಮ್ಸ್‌ ನಿರ್ದೇಶಕ ಡಾ. ಅಶೋಕ್ ಕುಮಾರ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. 

ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ವಾಕಥಾನ್ ಕೊಲ್ಲಾಪುರ ವೃತ್ತ, ರಾಣಿ ಚನ್ನಮ್ಮ ವೃತ್ತದ ಮೂಲಕ ಹಾಯ್ದು ಸರ್ದಾರ್ ಮೈದಾನದಲ್ಲಿ ಕೊನೆಗೊಂಡಿತು. ಸುಮಾರು 7ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗಿಯಾಗಿದ್ದರು. 

ಮಾದಕ ವಸ್ತುಗಳ ಹಾವಳಿ ಸಹಿಸುವುದಿಲ್ಲ: ಡಾ. ಭಗವಾನ್ 

ನಮ್ಮ ದೇಶದ, ರಾಜ್ಯದ ಯುವಶಕ್ತಿಯನ್ನು ಕುಂದಿಸುತ್ತಿರುವ ಮಾದಕ ವಸ್ತುಗಳ ಹಾವಳಿಯನ್ನು ನಮ್ಮ ವಿಶ್ವವಿದ್ಯಾಲಯ ಸಹಿಸುವುದಿಲ್ಲ. ವಿದ್ಯಾರ್ಥಿಗಳನ್ನು ಈ ದಾಳಿಯಿಂದ ರಕ್ಷಿಸಲು ನಾವು ನಿರಂತರ ಮತ್ತು ಬಹಳ ಗಂಭೀರ ಹೆಜ್ಜೆಗಳನ್ನು ಇಟ್ಟಿದ್ದೇವೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ತಿಳಿಸಿದರು. 

ದೇಶದ ಬಹುದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವಾದ ನಮ್ಮ ಸಂಸ್ಥೆಯ ಅಡಿಯಲ್ಲಿ ಸುಮಾರು 1500 ಶಿಕ್ಷಣ ಸಂಸ್ಥೆಗಳು ಸಂಯೋಜನೆಗೊಂಡಿವೆ. ಒಟ್ಟು 3.5 ಲಕ್ಷ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಸುಮಾರು 55 ಶಿಕ್ಷಣ ಸಂಸ್ಥೆಗಳಿವೆ. ಈ ಎಲ್ಲಾ ಕಾಲೇಜುಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲಾ ಕ್ಯಾಂಪಸ್ ಗಳನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಕೇವಲ ತರಗತಿ, ಬೋಧನೆ, ಪರೀಕ್ಷೆ, ಫಲಿತಾಂಶವಷ್ಟೇ ನಮ್ಮ ಕೆಲಸವಾಗಬಾರದು, ನಾಳಿನ ಸಮಾಜಕ್ಕೆ ಆರೋಗ್ಯವಂತ, ಸ್ವಸ್ಥ, ಮಾನವೀಯ ಆರೋಗ್ಯ ವೃತ್ತಿಪರರನ್ನು ಬೆಳೆಸಬೇಕು ಎನ್ನುವುದು ನಮ್ಮ ವಿಶ್ವವಿದ್ಯಾಲಯದ ಧ್ಯೇಯ. ಅದಕ್ಕಾಗಿ ಈ ದೃಢವಾದ ಹೆಜ್ಜೆಯನ್ನಿಟ್ಟೀದ್ದೇವೆ. ಇಲ್ಲಿಯವರೆಗೆ 11 ಜಿಲ್ಲೆಗಳಲ್ಲಿ ನಶಾಮುಕ್ತ ಕ್ಯಾಂಪಸ್ ಹಾಗೂ ಅಂಗಾಂಗ ದಾನ ಅಭಿಯಾನ ನಡೆಸಲಾಗಿದೆ. ಸುಮಾರು 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ನಡಿಗೆಗೆ ಸಾಕ್ಷಿಯಾಗಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವುದು 12ನೇ ಕಾರ್ಯಕ್ರಮ. ನಿಮ್ಮೆಲ್ಲರ ಬೆಂಬಲ, ಪ್ರೇರಣೆಗೆ ನಾವು ಕೃತಜ್ಞರಾಗಿದ್ದೇವೆ ಎಂದು ಅವರು ತಿಳಿಸಿದರು.  

ಡ್ರಗ್ ಪೆಡ್ಲರ್‌ಗಳ ಕಣ್ಣು ಕರ್ನಾಟಕದ ಮೇಲೆ: ಪಂಜಾಬ್, ಕೇರಳ ಸೇರಿದಂತೆ ಉತ್ತರ ಭಾಗದ ರಾಜ್ಯಗಳ ನಂತರ ಇದೀಗ ಡ್ರಗ್ ಪೆಡ್ಲರ್ ಗಳ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ದೇಶಾದ್ಯಂತ ಸುಮಾರು ಶೇ 30ರಷ್ಯು ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ಒಂದೆರಡು ವರ್ಷಗಳ ಅವಧಿಯಲ್ಲಿ ಇದರ ಪ್ರಮಾಣದಲ್ಲಿ ಶೇ 63ರಷ್ಟು ಏರಿಕೆ ಕಂಡುಬಂದಿದೆ. ಇನ್ನು ನಾವು ಸುಮ್ಮನಿರಬಾರದು. ಈ ದಾಳಿಯ ವಿರುದ್ಧ ಒಗ್ಗಟ್ಟಿನ ಸಮರ ಸಾರಬೇಕು. ಈ ನಿಟ್ಟೀನಲ್ಲಿ ನಮ್ಮ ವಿಶ್ವವಿದ್ಯಾಲಯ ಪ್ರಾಯೋಗಿಕ ಹೆಜ್ಜೆಯನ್ನಿಟ್ಟಿದೆ. ನಿಮ್ಮೆಲ್ಲರ ಬೆಂಬಲ ದೊರೆತರೆ ನಾವು ಬಹುಬೇಗ ಗುರಿ ಮುಟ್ಟುತ್ತೇವೆ ಎಂದು ಅವರು ತಿಳಿಸಿದರು. 

ಡ್ರಗ್ ತಡೆಗೆ ಗಂಭೀ? ಪ್ರಯತ್ನ: ಜಿಲ್ಲಾಧಿಕಾರಿ 

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಮಾದಕ ವಸ್ತುಗಳ ಉಪಯೋಗ ಹಾಗೂ ಮಾರಾಟವನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯ. ಜಿಲ್ಲೆಯಾದ್ಯಂತ ಡ್ರಗ್ ಹಾವಳಿಯನ್ನು ತಡೆಯಲು ನಾವೆಲ್ಲ ಗಂಭೀರ ಪ್ರಯತ್ನ ಮಾಡುತ್ತಿದ್ದೇವೆ ಎಂದರು.  

ಪೋಲಿಸ್ ಇಲಾಖೆ ಪ್ರತಿಯೊಂದು ಹಂತದಲ್ಲಿಯೂ ನಿಗಾ ವಹಿಸುತ್ತಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಸುಮಾರು 700 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ದುಶ್ಚಟಗಳು ಯಾವಾಗಲೂ ದುಷ್ಟ ಸಹವಾಸದ ರೂಪದಲ್ಲಿ ಬಂದು ಆವರಿಸಿಕೊಳ್ಳುತ್ತವೆ. ಆದ್ದರಿಂದ ಸ್ನೇಹಿತರನ್ನು ಆರಿಸಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಿ. ದಾರಿ ತಪ್ಪಿಸುವವರಿಂದ ದೂರವಿರಿ ಒಂದು ಸಲಹೆ ನೀಡಿದರು. 

ವ್ಯಸನಗಳ ಕಪಿಮುಷ್ಟಿಗೆ ಸಿಲುಕಿದ ಮಕ್ಕಳನ್ನು ಗುರುತಿಸುವುದು ಬಹಳ ಸುಲಭ. ಅವರ ವರ್ತನೆಯಲ್ಲಿ, ಮಾತಿನಲ್ಲಿ, ಕಣ್ಣುಗಳಲ್ಲಿ ಗುರುತರ ಬದಲಾವಣೆಗಳು ಕಂಡುಬರುತ್ತವೆ. ಇಂತಹ ಸಂದರ್ಭದಲ್ಲಿ ಪೋಷಕರು ಹಾಗೂ ಶಿಕ್ಷಕರು ಬಹಳ ಎಚ್ಚರಿಕೆಯಿಂದ ವರ್ತಿಸಬೇಕು. ಅವರನ್ನು ಚಟಗಳಿಂದ ಹೊರಗೆ ತರುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು. 

ಹಳ್ಳಿಗಳನ್ನೂ ವ್ಯಸನಮುಕ್ತ ಮಾಡಬೇಕು: ಸ್ವಾಮೀಜಿ  

ತಂಬಾಕು, ಸಾರಾಯಿ, ಗಾಂಜಾದಂತಹ ಮಾದಕ ವಸ್ತುಗಳ ವ್ಯಸನ ನಗರಗಳಿಗೆ ಮಾತ್ರವಲ್ಲ, ಹಳ್ಳಿಗಳನ್ನೂ ಆಕ್ರಮಿಸಿಕೊಂಡಿರುವುದು ದುರಂತ. ಕುಟುಂಬದ, ದೇಶದ, ಸಮಾಜದ ಬೆನ್ನೆಲುಬಾಗಿರುವ ಯುವಕರು ದುಶ್ಚಟಗಳಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನಶಾಮುಕ್ತ ಸಮಾಜ ನಿರ್ಮಿಸುವ ಅಭಿಯಾನಗಳು ಹಳ್ಳಿಗಳನ್ನೂ ತಲುಪುವಂತಾಗಬೇಕು.  

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕೈಗೊಂಡಿರುವ ಮತ್ತೊಂದು ಮಹತ್ವಪೂರ್ಣ ಹೆಜ್ಜೆ ಅಂಗಾಂಗ ದಾನ. ಮಾನವನ ಶರೀರ ಪರೋಪಕಾರಕ್ಕಾಗಿ ವಿನಿಯೋಗವಾಗಬೇಕು. ಬದುಕಿದ್ದಾಗಲೂ ಆನಂತರವೂ. ಆದ್ದರಿಂದ ನಮ್ಮ ನಿಧನದ ನಂತರ ನಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪರೋಪಕಾರ ಮೆರೆಯೋಣ. ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಪೂರ್ಣಾನಂದ ಭಾರತಿ ಸ್ವಾಮೀಜಿ ಪಾಲ್ಗೊಂಡಿದ್ದರು.