ನಾಟಕಗಳು ಮನಃಪರಿವರ್ತನೆಗೆ ಉತ್ತಮ ವೇದಿಕೆ
Dramas are a good platform for change of heart.
ಧಾರವಾಡ 02: ನಾಟಕಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೇ ಮನಸ್ಸಿನಲ್ಲಿರುವ ಸಮಸ್ಯೆ, ಭಿನ್ನಾಭಿಪ್ರಾಯ, ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಜೀವನ ನಡೆಸಲು ಉತ್ತಮ ವೇದಿಕೆಯಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಅವರು ಹೇಳಿದರು.
ಇಂದು ಕೇಂದ್ರ ಕಾರಾಗೃಹದ ಗಾಂಧಿ ಭವನದಲ್ಲಿ ರಂಗಾಯಣ ಧಾರವಾಡ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಆಯೋಜಿಸಿದ್ದ "ರಂಗಗೀತೆ ಹಾಗೂ ಮರಳಿ ಮಹಾತ್ಮನೆಡೆಗೆ" ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಯಾವುದೋ ಒಂದು ತಪ್ಪನ್ನು ಮಾಡಿ ಶಿಕ್ಷೆ ಅನುಭವಿಸುತ್ತಿರುವ ಕಾರಾಗೃಹ ನಿವಾಸಿಗಳಿಗೆ ರಂಗಾಯಣವು ಈಗಾಗಲೇ ರಂಗ ಶಿಬಿರದ ಮೂಲಕ ಅವರ ಕಲೆಯನ್ನು ಗುರುತಿಸಿ, ಮುಂದಿನ ದಿನಗಳಲ್ಲಿ ಅವರು ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಪರಿಣಾಮವನ್ನು ಬೀರಿದೆ. ಗಾಂಧಿ ಎಂಬ ವ್ಯಕ್ತಿತ್ವವು ಶ್ರೇಷ್ಠವಾದುದು. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಗಾಂಧಿಜಿಯವರ ಪ್ರಭಾವ ಬೀರಿದೆ. ಪ್ರಸ್ತುತ ದಿನದಲ್ಲಿ ಭೂಗೋಳವು ಯುದ್ಧವನ್ನು ಎದುರಿಸುತ್ತಿದೆ. ಇಂತಹ ಘಟನೆಗಳು ನಡೆಯಬಾರದೆಂದು ಗಾಂಧಿಜಿಯವರು ಗ್ರಾಮ ಸ್ವರಾಜ್ಯ, ಸರಳಜೀವನ ಶೈಲಿ, ಅಸ್ಪೃಶ್ಯತಾ ನಿವಾರಣೆ, ಅಹಿಂಸೆಯನ್ನು ಅನುಸರಿಸಿದ್ದರು. ಇಂದು ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳಲ್ಲಿ ಗಾಂಧೀಜಿಯವರ ತತ್ವಗಳು ಸೂಕ್ತವಾಗಿವೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಗಾಂಧಿಜಿಯವರ ಪ್ರಭಾವ, ಚಳುವಳಿ, ಮಾರ್ಗದರ್ಶನಗಳ ಕುರಿತ ಈ ನಾಟಕವು ಮಹತ್ವವಾಗಿದೆ ಎಂದರು.
ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ನಿರ್ಮಲ ಬಿ.ಆರ್ ಅವರು ಮಾತನಾಡಿ, ಕಾರಾಗೃಹ ನಿವಾಸಿಗಳು ನಾಟಕವನ್ನು ಮನರಂಜನೆಗಾಗಿ ನೋಡದೇ ಅದರಲ್ಲಿರುವ ಸಂದೇಶಗಳನ್ನು ಅರಿತುಕೊಂಡು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕಲೆ, ಪ್ರತಿಭೆ, ಶಿಕ್ಷಣವು ನಿಮಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು
ಕೇಂದ್ರ ಕಾರಾಗೃಹದ ಅಧೀಕ್ಷಕರಾದ ರಘುಪತಿ ಸಿ.ಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ನಾಟಕ ಪ್ರದರ್ಶನಗೊಳ್ಳಬೇಕಾದರೆ ಕಲಾವಿದರ ಪರಿಶ್ರಮ ಮುಖ್ಯವಾಗಿರುತ್ತದೆ. ಅಂತಹ ಕಲೆಗೆ ಪ್ರೋತ್ಸಾಹ ನೀಡಬೇಕು. ಒಂದು ಕ್ಷಣದಲ್ಲಿ ಮಾಡುವ ತಪ್ಪಿನಿಂದಾಗಿ ಇಂದು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಲ್ಲಿಯೂ ಕಲೆ, ಪ್ರತಿಭೆ ಅಡಗಿರುತ್ತದೆ. ಇಂತಹ ಪ್ರತಿಭೆಗಳಿಗೆ ಕೇಂದ್ರ ಕಾರಾಗೃಹವು ಕಲೆ, ಕೌಶಲ್ಯಗಳನ್ನು ರೂಪಿಸುವಂತಹ ಹಲವಾರು ಯೋಜನೆಗಳ ಮೂಲಕ ಕೈದಿಗಳ ಮುಂದಿನ ಭವಿಷ್ಯಕ್ಕೆ ಉತ್ತಮ ವೇದಿಕೆ ಹಾಗೂ ಆರ್ಥಿಕ ಸಹಾಯವನ್ನು ಮಾಡುತ್ತದೆ. ಅವುಗಳ ಪ್ರಯೋಜನಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಕಾರಾಗೃಹದ ಜೈಲರ್ ದೀಪಾ ರಾಮದುರ್ಗ ಅವರು ಉಪಸ್ಥಿತರಿದ್ದರು. ಶಿಕ್ಷಕರಾದ ಸಿ.ಪಿ ಕುಮಾರ ಕುರಬೆಟ್ ನಿರೂಪಿಸಿದರು. ನಂತರ ಕುಮಾರ ಲಾಲ್‌ಸಾಬ್ ಹಾಗೂ ಲಕ್ಷ್ಮಣ ಪೀರಗಾರ ರಚಿಸಿ, ರಾಘವ ಕಮ್ಮಾರ ಸಂಗೀತ ಸಂಯೋಜಿಸಿ, ನಿಕಟಪೂರ್ವ ರಂಗಾಯಣ ನಿರ್ದೇಶಕರಾದ ದಿ. ರಾಜು ತಾಳಿಕೋಟಿ ಪರಿಕಲ್ಪನೆ-ಮಾರ್ಗದರ್ಶನ ಮಾಡಿದ “ಮರಳಿ ಮಹಾತ್ಮನೆಡೆಗೆ” ನಾಟಕ ಹಾಗೂ ರಂಗಗೀತೆಗಳನ್ನು ಧಾರವಾಡ ರಂಗಾಯಣ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 