221ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ

ಬಳ್ಳಾರಿ ಜೂ.29: ಬಳ್ಳಾರಿಯಲ್ಲಿ ಒಳಚರಂಡಿ ವ್ಯವಸ್ಥೆ ಹಳೆಯದಾಗಿದ್ದು, 221 ಕೋಟಿ ರೂ.ವೆಚ್ಚದಲ್ಲಿ ಬಳ್ಳಾರಿಯ ಒಳಚರಂಡಿ ವ್ಯವಸ್ಥೆ ರೂಪಿಸುವ ಯೋಜನೆ ನಮ್ಮ ಮುಂದಿದ್ದು, ಜಿಲ್ಲಾ ಖನಿಜ ನಿಧಿ ಅಡಿ ಬಳಸಿಕೊಂಡು ಯೋಜನೆ ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಅನುಮೋದನೆ ಕೊಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

 ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗೋನಾಳ ಗ್ರಾಮದ ರೈತರ ಸಹಯೋಗದೊಂದಿಗೆ 102 ಎಕರೆ ಪ್ರಸ್ತಾಪಿತ ವಸತಿ ಯೋಜನೆಗೆ ರಾಜ್ಯ ಸರಕಾರದ ಕ್ಯಾಬಿನೆಟ್ನಲ್ಲಿ ಅನುಮೋದನೆ ನೀಡಿರುವುದಕ್ಕೆ ಪ್ರಸ್ತಾಪಿತ ವಸತಿ ಯೋಜನೆಯ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಳೆದ ತಿಂಗಳು ಪ್ರಗತಿ ಪರಿಶೀಲನೆ ನಡೆಸಲು ಆಗಮಿಸಿದ್ದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ನಗರದ 12 ವಲಯಗಳಿಗೆ ನಿರಂತರ ಕುಡಿಯುವ ನೀರು ಸರಬರಾಜಿಗೆ ಚಾಲನೆ ನೀಡಲಾಗುತ್ತದೆ ಎಂದರು.

ಈ ಪ್ರಸ್ತಾವಿತ ವಸತಿ ಯೋಜನೆ ಬೇಗ ಪೂರ್ಣಗೊಳ್ಳಲಿ ಮತ್ತು ಇನ್ನೂ ಮೂನ್ನೂರು ಎಕರೆಯಲ್ಲಿ ವಸತಿ ಯೋಜನೆ ಅಭಿವೃದ್ಧಿಪಡಿಸಿ; ನಿವೇಶನವಿಲ್ಲ ಎಂಬ ಕೊರಗನ್ನು ನಿವಾರಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

      ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಡೈನಾಮಿಕ್ ಯುವಕರಾಗಿದ್ದು, ಒಳ್ಳೆಯ ಕೆಲಸಗಳು ಮಾಡುವಂತೆ ಅವರು ಸಲಹೆ ನೀಡಿದರು.

       ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಮಾತನಾಡಿ,ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ನಿರಂತರ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಬಹುದೊಡ್ಡ ಸಮಸ್ಯೆಯಾಗಿದ್ದು, ಇದು ಆಗುವುದಿಲ್ಲ ಅಂತ ಕಳೆದ ತಿಂಗಳು ಜಿಲ್ಲೆಗೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಹೇಳಿದ್ದೆ; ಆದರೇ ಅವರು ಮಾಡೇ ಮಾಡ್ತೀವಿ ನೋಡಿ ಅಂತೇಳಿ ಮಾಡಿ ತೋರಿಸಿದ್ದಾರೆ. ಈ ರೀತಿ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುವಂತ ಸಚಿವರು ನಮಗೆ ಬೇಕು. ಇಚ್ಛಾಶಕ್ತಿ ಇದ್ದರೇ ಮಾತ್ರ ಕೆಲಸಗಳಾಗಲು ಸಾಧ್ಯ ಎನ್ನುವುದಕ್ಕೆ ಇವರು ಉದಾಹರಣೆ ಎಂದರು.

ಈ ಲೇಔಟ್ಗೆ ಕ್ಯಾಬಿನೆಟ್ ನಲ್ಲಿ 50:50 ಅನುಪಾತದಡಿ ಅನುಮೋದನೆ ದೊರಕಿಸಿಕೊಡುವಲ್ಲಿ ನಗರಾಭಿವೃದ್ಧಿ ಸಚಿವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ರೈತರಿಗೆ ಲಾಭವಾಗುವ ದೃಷ್ಟಿಯಿಂದ ಈ ಅನುಪಾತದಡಿ ಅನುಮೋದನೆ ದೊರಕುವಂತೆ ನೋಡಿಕೊಳ್ಳಲಾಗಿದೆ. ಇದು ಒಂದು ಒಳ್ಳೆಯ ಲೇಔಟ್ ಆಗಬೇಕು ಎಂದರು.

  ಶಾಸಕ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಇನ್ನರ್ ಮತ್ತು ಔಟರ್ ರಿಂಗ್ ರೋಡ್ನ ಮಧ್ಯದಲ್ಲಿ ಈ ಲೇಔಟ್ ಬರಲಿದ್ದು, ಬಳ್ಳಾರಿಯ ಪ್ರಮುಖ ಲೇಔಟ್ ಇದಾಗಿರಲಿದೆ. ಈ ಪ್ರಸ್ತಾವನೆಗೆ ಕ್ಯಾಬಿನೆಟ್ನಲ್ಲಿ ಅನುಮೋದನೆ ದೊರಕಿಸಿಕೊಟ್ಟಿರುವುದಕ್ಕೆ ಧನ್ಯವಾದ ಎಂದರು.

  ಬಳ್ಳಾರಿ ನಗರದ ಒಳಚರಂಡಿ ವ್ಯವಸ್ಥೆ 1976ರಲ್ಲಿ ನಿಮರ್ಾಣವಾಗಿದ್ದು,ಅದನ್ನು ಸದ್ಯದ ಕಾಲಕ್ಕೆ ತಕ್ಕಂತೆ ವಿನ್ಯಾಸಪಡಿಸುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯು ನಗರಾಭಿವೃದ್ಧಿ ಇಲಾಖೆಯಲ್ಲಿದ್ದು, ಅದಕ್ಕೂ ಅನುಮೋದನೆ ಕೊಡಿಸಬೇಕು ಎಂದು ಮನವಿ ಮಾಡಿದರು.

  ಶಾಸಕ ಕೆ.ಸಿ.ಕೊಂಡಯ್ಯ ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆಗೆ ಬೇರೆ ಪಾಲಿಕೆಗಳಿಗೆ ಬಂದ ರೀತಿಯಲ್ಲಿ ಅನುದಾನ ಬಂದಿಲ್ಲ; ಇತ್ತ ಕಡೆ ನಗರಾಭಿವೃದ್ಧಿ ಸಚಿವರು ಗಮನಹರಿಸಬೇಕು ಮತ್ತು ನಗರದ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು ಎಂದರು.

  ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಅವರು ನಗರಾಭಿವೃದ್ಧಿ ಸಚಿವರಿಗೆ ಸನ್ಮಾನಿಸಿ ಬೆಳ್ಳಿಗದೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ರೈತರು ಸಹ ಸಚಿವದ್ವಯರನ್ನು ಸನ್ಮಾನಿಸಿದರು.

ಬುಡಾ ಆಯುಕ್ತರಾದ ಈರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

  ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಮತ್ತಿತರರು ಇದ್ದರು.