ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆ: ಅರ್ಥಪೂರ್ಣ ಆಚರಣೆಗೆ ನಿರ್ಧಾರ

Dr. Rajkumar's birthday: Decision for a meaningful celebration

ವಿಜಯಪುರ ಏ.21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಇವರ ಸಹಯೋಗದಲ್ಲಿ  ಇದೇ ಏಪ್ರಿಲ್ 24 ರಂದು  ಡಾ.ರಾಜ್ ಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು  ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. 

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. 

ಇದೇ ಏಪ್ರಿಲ್ 24 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಚರಿಸಲು ನಿರ್ಣಯಿಸಲಾಗಿದ್ದು, ಜನ್ಮದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು. 

ಅಂದು ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಲು ಆಹ್ವಾನ ಪತ್ರಿಕೆ, ವೇದಿಕೆ ಸಿದ್ಧತೆ ಮಾಡಿಕೊಳ್ಳುವಂತೆ  ಹಾಗೂ ಉಪನ್ಯಾಸಕರನ್ನು ಆಹ್ವಾನಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಅವರು, ಈ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ  ನಡೆಯಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಹಾಜರಿರಬೇಕು. ಸೂಕ್ತ ಪೋಲಿಸ್ ಬಂದೋಬಸ್ತ್‌, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಅಧಿಕಾರಿಗಳು  

ಮಾಡಬೇಕು. ಅಂದು ಡಾ.ರಾಜ್ ಕುಮಾರ್ ಅವರ ಚಲನಚಿತ್ರಗಳ ಗೀತಗಾಯನ ನಡೆಯಲಿದ್ದು, ಡಾ.ರಾಜ್ ಕುಮಾರ್ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಸಭೆ ಮೂಲಕ ಮನವಿ ಮಾಡಿದರು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಕ್ರೀಡಾಧಿಕಾರಿ ರಾಜಶೇಖರ್ ದೈವಾಡಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ಸಂತೋಷ ಭೋವಿ,ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ಅನಸೂಯಾ ಚಲವಾದಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು,ವಿವಿಧ ಸಮಾಜದ ಮುಖಂಡರು,ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.