ಡಾ.ಹಳಕಟ್ಟಿ ಶ್ರೇಷ್ಠ ಸಮಾಜ ಚಿಂತಕ: ಡಾ.ಹೂಗಾರ

ಡಾ.ಹಳಕಟ್ಟಿ ಶ್ರೇಷ್ಠ ಸಮಾಜ ಚಿಂತಕ: ಡಾ.ಹೂಗಾರ  Dr. Halakatti Great Social Thinker: Dr. Hoogar

ತಾಳಿಕೋಟಿ 02:  ಡಾ.ಫ.ಗು. ಹಳಕಟ್ಟಿಯವರು ಕೇವಲ ಶರಣರ ವಚನಗಳನ್ನು ರಕ್ಷಿಸುವ ಕೆಲಸವನ್ನು ಮಾತ್ರ ಮಾಡಲಿಲ್ಲ ಅವರು ಸಾಮಾಜಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ ಅವುಗಳನ್ನು ತಿಳಿದುಕೊಳ್ಳುವ ಅಗತ್ಯ ಇದೆ ಎಂದು ತಹಸಿಲ್ದಾರ ಡಾ.ವಿನಯಾ ಹೂಗಾರ ಹೇಳಿದರು. ಬುಧವಾರ ಪಟ್ಟಣದ ತಹಸಿಲ್ದಾರ್ ಕಾರ್ಯಾಲಯ ಸಭಾಂಗಣದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಹಾಗೂ ವಚನ ಸಂರಕ್ಷಣಾ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಜಯಪುರದ ಭೂತನಾಳ ಕೆರೆ ನಿರ್ಮಾಣ, ಪ್ರಸಿದ್ಧ ಬಿ.ಎಲ್‌.ಡಿ.ಇ ಸಂಸ್ಥೆ ಸ್ಥಾಪನೆ, ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಮಹಿಳೆಯರಿಗಾಗಿ ಮೂರು ಕನ್ನಡ ಶಾಲೆಗಳನ್ನು ತೆರೆದಿರುವುದು ಅವರ ವಿಶಿಷ್ಟ ಸೇವೆಗಳಾಗಿವೆ ನಮಗೆಲ್ಲರಿಗೂ ಅವರ ಬದುಕು ಮಾದರಿಯಾಗಬೇಕಾಗಿದೆ ಎಂದರು. 

 ಕಸಾಪ ಗೌರವ ಕಾರ್ಯದರ್ಶಿ ಗಂಗಾಧರ ಕಸ್ತೂರಿ ಮಾತನಾಡಿ ವಚನ ಪಿತಾಮರೆಂದೇ ಹೆಸರುವಾಸಿಯಾಗಿದ್ದ ಡಾ.ಫ.ಗು. ಹಳಕಟ್ಟಿ ಅವರು ಶ್ರೇಷ್ಠ ಸಂಶೋಧಕರು ಸಾಹಿತ್ಯ ಪ್ರಚಾರಕರು ಮತ್ತು ಸಂಪಾದಕರಾಗಿದ್ದರು. ಹೆಸರು ಫಕೀರ​‍್ಪ ಆಗಿತ್ತು ಆದರೆ ಬಸವಾದಿ ಶರಣರ ವಚನಗಳನ್ನು ರಕ್ಷಿಸಿ ಬೆಳೆಸಲು ತಮ್ಮ ಜೀವನವನ್ನು ಪಕೀರನಂತೆ ನಡೆಸಿದರು. ವಚನಗಳನ್ನು ಮುದ್ರಿಸಿ ಪ್ರಕಟಿಸಲು ತಮ್ಮ ಸ್ವಂತ ಮನೆಯನ್ನೂ ಮಾರಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸಿದರು. ಅವರು ಈ ಕಾರ್ಯ ಮಾಡದೇ ಹೋದಲ್ಲಿ ಜನಸಾಮಾನ್ಯರಿಗೆ ಶರಣರ ವಚನಗಳ ನೈಜ ಪರಿಚಯವೇ ಆಗುತ್ತಿರಲಿಲ್ಲ, ಇಂದಿನ ಯುವ ಪೀಳಿಗೆ ಅವರ ಬದುಕಿನ ಈ ಆದರ್ಶಗಳನ್ನು ತಿಳಿದುಕೊಳ್ಳುವ ಅಗತ್ಯ ಇದೆ ಎಂದರು. 

ಕಾರ್ಯಕ್ರಮದ ಆರಂಭದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಾ.ಶ್ರೀಶೈಲ ಹುಕ್ಕೇರಿ, ಜಿ.ಜಿ.ಮದರಕಲ್ಲ,ಇಸಿಓ ಸುರೇಶ ಹಿರೇಮಠ,ಸಿಆರ್ ಸಿ ರಾಜು ವಿಜಾಪುರ, ಸಂಗಮೇಶ ಪಾಲ್ಕಿ, ಈರಣ್ಣ ಕಲಬುರ್ಗಿ, ಶಿವಲಿಂಗಪ್ಪ ಪಾಲ್ಕಿ, ಮಹಾಂತೇಶ ಮುರಾಳ,ಜಗದೀಶ ಬಿಳೆಭಾವಿ,ಅಶೋಕ ಚಿನಗುಡಿ, ಪ್ರಭು ಸಣ್ಣಕ್ಕಿ,ಡಾ. ಅನಿತಾ ಸಜ್ಜನ, ಮಹಾನಂದ ಉಮರ್ಜಿ, ಸುಮಂಗಲಾ, ಶೈಲಶ್ರೀ ಕಂಚಾಣಿ, ಮಹಾಂತಗೌಡ ದೊರೆಗೋಳ, ಮುನ್ನಾ ಅತ್ತಾರ, ಮೊದಲಾದವರು ಇದ್ದರು.