ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಡಾ.ಸಿ.ಎನ್. ಅಶ್ವಥ್ ನಾರಾಯಣ

ಬೆಂಗಳೂರು, ಫೆ.4, ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಮಂಗಳವಾರ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಐಎಚ್‌ಬಿಟಿ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು, ಅಲ್ಲಿನ ಪರಿಸ್ಥಿತಿ, ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. 

ಅಶ್ವಥ್ ನಾರಾಯಣ್  ಅವರಿಗೆ ಆಸ್ಪತ್ರೆ ನಿರ್ದೇಶಕಿ ಜಯಂತಿ ಸೇರಿದಂತೆ ಹಲವು‌ ವೈದ್ಯರು ಸಾಥ್ ನೀಡಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಸ್ಕಿಲ್ ಲ್ಯಾಬ್ ವೈದ್ಯಕೀಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಕಲಿಕೆ ಪ್ರಯೋಗಕ್ಕೆ ಅವಶ್ಯಕತೆ ಇದೆ. ಇಲ್ಲಿ‌ ನೇರವಾಗಿ ರೋಗಿಗಳ‌ ಮೇಲೆ ಪ್ರಯೋಗ ಮಾಡುವುದಿಲ್ಲ. ಮ್ಯಾನಿಕ್ವಿನ್ಸ್ ಮೇಲೆ ಪ್ರಯೋಗ ಮಾಡಲಾಗುತ್ತದೆ. ಕಲಿಕೆಗೆ ಇದು ಅವಶ್ಯಕತೆ ಇದೆ ಎಂದರು.

ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. 17 ವೈದ್ಯಕೀಯ ಕಾಲೇಜಿನಲ್ಲಿಯೂ ಈ ಸೌಲಭ್ಯ ಒದಗಿಸಬೇಕು ಎಂದು ನಿರ್ಧರಿಸಿದ್ದೇವೆ. ಕಲಿಕೆಯ ಗುಣಮಟ್ಟ ಹೆಚ್ಚಿಸಲು ಹಾಗೂ ರೋಗಿಗಳಿಗೂ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲು ಈ ಸೌಲಭ್ಯ ಕಲ್ಪಿಸಲು ಚಿಂತನೆ ನಡೆದಿದೆ. ತರಬೇತಿಯಲ್ಲಿರುವ ಸಿಬ್ಬಂದಿ ರೋಗಿಗಳಿಗೆ ಚಿತ್ರ ಹಿಂಸೆ ನೀಡುತ್ತಾರೆ ಎನ್ನುವ ಆರೋಪವಿದೆ. ಈ ಅಪಾದನೆಯಿಂದ ಮುಕ್ತವಾಗಲು ಎಲ್ಲಾ‌ ಸರ್ಕಾರಿ  ಮೆಡಿಕಲ್ ಕಾಲೇಜಿ‌ನಲ್ಲಿ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.

ಆಸ್ಪತ್ರೆಯ ಆವರಣದಲ್ಲಿ ಪಾರ್ಕಿಂಗ್ ಲಾಟ್ ಮಾಡಲು ನಿರ್ಧರಿಸಲಾಗಿದೆ. ಯಾವುದೇ ಸಚಿವರು, ವೈದ್ಯರು ಬಂದರೂ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಬರಬೇಕು, ಎಲೆಕ್ಟ್ರಿಕ್ ಮೊಬೈಲ್ ವಾಹನ ಒದಗಿಸಲು ಚಿಂತನೆ ನಡೆದಿದೆ. ಪಾದಚಾರಿ ರಸ್ತೆ ನಿರ್ಮಾಣಕ್ಕೂ ಚಿಂತಿಸಿದ್ದೇವೆ. ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ಅಶ್ವಥ್ ನಾರಾಯಣ್ ಹೇಳಿದರು. ಸಂಪುಟ ಸೇರಲು ಎಲ್ಲಾರಿಗೂ ಆಸೆ ಇರುತ್ತದೆ. ಅಪೇಕ್ಷೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಕೂಡ ಸಚಿವನಾಗಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಬಡ್ತಿ ಬಯಸುವುದು ತಪ್ಪಲ್ಲ, ಸ್ಥಾನಮಾನ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ನಮ್ಮ ಪಕ್ಷದಲ್ಲಿ ಹಿರಿಯರು ಏನೇ ನಿರ್ಧಾರ ತೆಗೆದುಕೊಂಡರೂ ಎಲ್ಲಾ‌ ಶಾಸಕರು ಪಾಲಿಸುತ್ತಾರೆ. ಈ ಬಗ್ಗೆ  ಯಾವುದೇ ಕಗ್ಗಂಟಾಗದ ರೀತಿ ಮುಖ್ಯಮಂತ್ರಿ ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದರು.