ಬೆಂಗಳೂರು,ಫೆ 28 : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನು ಸಚಿವ ಕೆ.ಎಸ್.ಈಶ್ವರಪ್ಪ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಸ್ವಾತಂತ್ರ್ಯ ದೊರೆಸ್ವಾಮಿ ಅವರು ಅಮೂಲ್ಯ ಜೊತೆಗಿರುವ ಫೋಟೋ ಪ್ರದರ್ಶಿಸಿದರು. ದೊರೆಸ್ವಾಮಿ ಅವರು ಅಮೂಲ್ಯ ಕುಟುಂಬದವರ ಜತೆ ಫೋಟೋ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ನವರು ಏನನ್ನೇ ಹೇಳಿದರೂ ದೊರೆಸ್ವಾಮಿ ಅದಕ್ಕೆ ಸೋಬಾನೆ ಹಾಡುತ್ತಾರೆ. ಸಿದ್ದರಾಮಯ್ಯ ನರೇಂದ್ರ ಮೋದಿ ಅವರನ್ನು ಕೊಲೆಗಡುಕ ಅಂದರು. ಅವತ್ತೇ ಕಾಂಗ್ರೆಸ್ ನವರು ಸಿದ್ದರಾಮಯ್ಯ ಅವರನ್ನು ಹೊರಗೆ ಹಾಕಬೇಕಾಗಿತ್ತು ಎಂದು ಕಿಡಿ ಕಾರಿದರು.
ಅಮೂಲ್ಯ ಜೊತೆ ಫೋಟೊ ತೆಗೆಸಿಕೊಂಡಿದ್ದು ಯಾಕೆ ಎಂಬುದನ್ನು ಮೊದಲು ದೊರೆಸ್ವಾಮಿ ಸ್ಪಷ್ಟಪಡಿಸಲಿ. ಅಷ್ಟೇ ಅಲ್ಲದೇ ಕನ್ನಯ್ಯ ಮತ್ತಿತರ ಜತೆಯೂ ಯಾಕೆ ಫೋಟೊ ತೆಗೆಸಿಕೊಳ್ಳಲಾಯಿತು ಎಂದು ದೊರೆಸ್ವಾಮಿ ಸ್ಪಷ್ಟಪಡಿಸಲಿ. ನಾನು ದೊರೆಸ್ವಾಮಿ ಅವರನ್ನು ಪಾಕಿಸ್ತಾನ ಏಜೆಂಟ್ ಎಂದು ಕರೆಯುವುದಿಲ್ಲ. ಆದರೆ ನೀವು ಹಿರಿಯರಾಗಿ ನಮಗೆ ಮಾರ್ಗದರ್ಶನ ಮಾಡಿ ಎಂದರು.
ದೊರೆಸ್ವಾಮಿ ಅವರು ಅಮೂಲ್ಯ ಜೊತೆ ಫೋಟೋ ತೆಗಿಸಿಕೊಂಡಿರುವುದಕ್ಕೆ ಕ್ಷಮೆ ಕೇಳುತ್ತಾರಾ. ದೊರೆಸ್ವಾಮಿ ಅವರು ಫೋಟೋ ತೆಗಿಸಿಕೊಂಡಿರುವ ಬಗ್ಗೆ ಕಾಂಗ್ರೆಸ್ ನವರು ಕ್ಷಮೆ ಕೇಳುತ್ತಾರಾ. ಯತ್ನಾಳ್ ಬಳಸಿದ ಪದವನ್ನು ನಾನು ಬಳಸುವುದಿಲ್ಲ. ಆದರೆ ಯತ್ನಾಳ್ ಹೇಳಿಕೆಯನ್ನು ನೂರಕ್ಕೆ ನೂರು ಸಮರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.
ಯತ್ನಾಳ್ ಕ್ಷಮೆ ಕೇಳದಿದ್ದರೆ ಸದನ ನಡೆಯಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದು ಹೇಗೆ ಸದನ ನಡೆಯಲು ಬಿಡುವುದಿಲ್ಲ ಎಂಬುದನ್ನು ನಾವೂ ನೋಡುತ್ತೇವೆ ಎಂದು ಸಚಿವ ಈಶ್ವರಪ್ಪ ಸವಾಲು ಹಾಕಿದರು.
ಯತ್ನಾಳ್ ಹೇಳಿಕೆ ವಿಚಾರಕ್ಕೆ ಧರಣಿ ಮಾಡುತ್ತೀರಿ. ಪಾಕಿಸ್ತಾನ ಜಿಂದಾಬಾಂದ್ ಎಂದು ಕೂಗಿದವರ ವಿರುದ್ಧ ಯಾವ ರೀತಿಯ ಹೋರಾಟ ಮಾಡಿದ್ದೀರಿ ಎಂಬುದನ್ನು ಬಹಿರಂಗಪಡಿಸಿ. ನಿಮ್ಮ ವಿಚಾರ ರಾಷ್ಟ್ರಭಕ್ತರ ಪರವೋ?, ವಿರುದ್ಧವೋ? ಎಂಬುದನ್ನು ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.
ಪಾಕಿಸ್ತಾನದ ಏಜೆಂಟ್ ರೂಪದಲ್ಲಿ ಅನೇಕ ವ್ಯಕ್ತಿಗಳು ನಮ್ಮ ರಾಜ್ಯ, ರಾಷ್ಟ್ರದಲ್ಲಿದ್ದಾರೆ. ಯತ್ನಾಳ್ ಹೇಳಿಕೆಯನ್ನು ಮುಂದಿಟ್ಟುಕೊಂಡು ಈಗ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟುಹಬ್ಬ ಸಮಾರಂಭದಿಂದ ದೂರ ಉಳಿದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಿನ್ನೆ ಬೆಳಿಗ್ಗೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಹುಟ್ಟುಹಬ್ಬ ಅಂಗವಾಗಿ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಯಡಿಯೂರಪ್ಪ ಅವರಿಗೆ ದೇವರು ಉತ್ತಮ ಆಯಸ್ಸು,ಆರೋಗ್ಯ ಕೊಡಲಿ ಎಂದು ಹೋಮ, ಹವನ ಮಾಡಿದ್ದೇವೆ. ಹೀಗಾಗಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.