ವಾಷಿಂಗ್ಟನ್, ಏ ೨೨,ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅನಾರೋಗ್ಯ ಸಂಬಂಧ ವಿಶ್ವಾಸಾರ್ಹ ವರದಿಗಳು ಲಭ್ಯವಿಲ್ಲದಿದ್ದರೂ, ಕಿಮ್ ಜಾಂಗ್ ಉನ್ ಅವರಿಗೆ ಒಳಿತಾಗಲಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರೈಸಿದ್ದಾರೆ.ಕಿಮ್ ಜಾಂಗ್ ಉನ್ ಅವರ ಅನಾರೋಗ್ಯದ ಬಗ್ಗೆ ಮಾಧ್ಯಮಗಳು ಸುದ್ದಿಗಳನ್ನು ಬಿತ್ತರಿಸುತ್ತಿವೆ. ಆದರೆ, ನಮಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಕಿಮ್ ಜಾಂಗ್ ಉನ್ ಅವರೊಂದಿಗೆ ತಾನು ಉತ್ತಮ ಸಂಬಂಧ ಇರಿಸಿಕೊಂಡಿದ್ದೇನೆ. ವರದಿಗಳಂತೆ ಅವರ ಆರೋಗ್ಯ ಗಂಭೀರವಾಗಿದ್ದರೆ ಅವರು ಚೇತರಿಸಿಕೊಳ್ಳಲಿ, ಅವರಿಗೆ ಒಳಿತಾಗಲಿ ಎಂದಷ್ಟೆ ನಾನು ಹಾರೈಸುತ್ತೇನೆ ಎಂದು ಟ್ರಂಪ್ ವರದಿಗಾರರಿಗೆ ತಿಳಿಸಿದ್ದಾರೆ. ಉನ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ಸುದ್ದಿಗಳು ಹಬ್ಬಿವೆ. ಆದರೆ ಈ ವರದಿಗಳು ವಿಶ್ವಾಸಾರ್ಹ ಎಂದು ತಾವು ಪರಿಗಣಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ
ಅವರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಉತ್ತರ ಕೊರಿಯಾ ನಾಯಕನನ್ನು ಸಂಪರ್ಕಿಸಲಿದ್ದೇವೆ ಎಂದು ಟ್ರಂಪ್ ಹೇಳಿದರು.ಕಿಮ್ ಜಾಂಗ್ ಉನ್ ಸ್ಥಾನದಲ್ಲಿ ಬೇರೊಬ್ಬರು ಇದ್ದಿದ್ದರೆ, ಅಮೆರಿಕಾ ಉತ್ತರ ಕೊರಿಯಾದೊಂದಿಗೆ ಸಮರ ನಡೆಸುತಿತ್ತು ಎಂದು ಟ್ರಂಪ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಕಿಮ್ ಜಾಂಗ್ ಉನ್ ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಂತರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದಕ್ಷಿಣ ಕೊರಿಯಾದ ಆನ್‌ಲೈನ್ ಪತ್ರಿಕೆ ಡೈಲಿ ಎನ್‌ಕೆ ವರದಿ ಮಾಡಿದೆ. ಈ ವರದಿಗಳುನಿಜವಲ್ಲ ಎಂದು ದಕ್ಷಿಣ ಕೊರಿಯಾದ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಆದರೆ, ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದಲ್ಲಿ ಕಳೆದೊಂದು ವಾರದಲ್ಲಿ ನಡೆದ ಹಲವಾರು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಅವರ ಅಜ್ಜ ಹಾಗೂ ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಜನ್ಮದಿನ ಸಮಾರಂಭ ಸೇರಿ ಹಲವಾರು ಸರ್ಕಾರಿ ಸಭೆಯಲ್ಲಿ ಉನ್ ಭಾಗಿಯಾಗಿರಲಿಲ್ಲ.