ಅಹಮದಾಬಾದ್ ನಲ್ಲಿ ಡೊನಾಲ್ಡ್ ಟ್ರಂಪ್ ಬೃಹತ್ ರೋಡ್ ಶೋ: ಸಬರಮತಿ ಆಶ್ರಮಕ್ಕೆ ಭೇಟಿ

ಅಹಮದಾಬಾದ್, ಫೆ 24, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭವ್ಯ ಮತ್ತು ವರ್ಣರಂಜಿತ ಸ್ವಾಗತ ಪಡೆಯುವುದರ ಮೂಲಕ ತಮ್ಮ ಮೊದಲ ಅಧಿಕೃತ ಭಾರತ ಭೇಟಿಯನ್ನು ಆರಂಭಿಸಿದರು.  ಏರ್ಫೋರ್ಸ್ ಒನ್ ವಿಮಾನದಿಂದ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಅವರನ್ನು ಬರಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ  ವಿಮಾನ  ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ರತ್ನಗಂಬಳಿ ಮೇಲೆ ನಡೆದು ಬಂದ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಹಸ್ತಲಾಘವ ಮಾಡಿ, ತಬ್ಬಿಕೊಂಡು ಸ್ವಾಗತಿಸಿದರು. 

ಗಣ್ಯರನ್ನು ಸ್ವಾಗತಿಸಲು ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ವಿಜಯ್ ರೂಪಾನಿ ಸಹ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.  ಟ್ರಂಪ್ ಅವರ ಜೊತೆಗಿದ್ದ ಅವರ ಪುತ್ರಿ ಇವಾಂಕಾ, ಅಳಿಯ ಜೆರೆಡ್ ಕುಶ್ನರ್ ಮತ್ತು 12 ಸದಸ್ಯರ ಉನ್ನತ ನಿಯೋಗವನ್ನು ಸಂಗೀತ ಹಾಗೂ ನೃತ್ಯಗಳ ಮೂಲಕ ಸ್ವಾಗತಿಸಲಾಯಿತು.   ಟ್ರಂಪ್ ಮತ್ತು ಮೆಲಾನಿಯಾ ಅವರನ್ನು ಅವರ ಅಧಿಕೃತ ವಾಹನ 'ದಿ ಬೀಸ್ಟ್' ವರೆಗೆ ಪ್ರಧಾನಿ ಮೋದಿ  ಕರೆದೊಯ್ದರು. ದಿ ಬೀಸ್ಟ್ ಕಾರು ವಿಮಾನ ನಿಲ್ದಾಣದಿಂದ ಹೊರಟು  ಅಹಮದಾಬಾದ್ನ ರಸ್ತೆಗಳಲ್ಲಿ ಸಾಗಿತು.  ರಸ್ತೆಗಳ ಇಕ್ಕೆಲೆಗಳಲ್ಲಿ ನಿಂತಿದ್ದ ಜನರು ಟ್ರಂಪ್ ಅವರನ್ನು ಸ್ವಾಗತಿಸಿದರು. 20 ಕಿ.ಮೀ ದೂರದ ಸಬರಮತಿ ಆಶ್ರಮದವರೆಗೂ ಜನರು ರಸ್ತೆಗಳ ಇಕ್ಕೆಲೆಗಳಲ್ಲಿ ತುಂಬಿದ್ದರು. ಸಬರಮತಿ ಆಶ್ರಮದಲ್ಲಿ ಟ್ರಂಪ್ ಮತ್ತು ಮೆಲಾನಿಯಾ ಚರಕದಿಂದ ನೂಲು ಬಿಚ್ಚಿದರು. ಬಳಿಕ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವದ ಬಗ್ಗೆ ಬರೆದರು.