ಹಳೆಯ ಕಲಾವಿದರನ್ನು ಮರೆಯಬೇಡ: ದರ್ಶನ್ ಗೆ ಜಗ್ಗೇಶ್ ಮನವಿ

       ಬೆಂಗಳೂರು, ಆ 26     ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ 60ಕ್ಕೂ ಹೆಚ್ಚು ಕಲಾವಿದರು ನಟಿಸಿರುವ ಕುರುಕ್ಷೇತ್ರ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ ನವರಸ ನಾಯಕ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.  

   ಕನ್ನಡಕ್ಕಾಗಿ ಎತ್ತಿರುವ ಗದೆ ಗುರುರಾಯರ ದಯೆಯಿಂದ ನಿನ್ನ ಭುಜದ ಮೇಲೆ ಶಾಶ್ವತವಾಗಿರಲಿ ಅಂತೆಯೇ ನಿನ್ನ ಚಿತ್ರಗಳಲ್ಲಿ ಹಳೆಯ ಕಲಾವಿದರಿಗೆ ಅವಕಾಶ ಕೊಟ್ಟು ಅವರ ಉದರ ತುಂಬಿಸು ಕೆಲಸ ಮಾಡು ಎಂದು ದರ್ಶನ್ ಗೆ ಮನವಿ ಮಾಡಿದ್ದಾರೆ. 

   ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ನನ್ನ ಆನಂದಕ್ಕೆ ಪಾರವೇ ಇಲ್ಲಾ! ಅನ್ಯ ರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೇ ನೋವು ನುಂಗಿ ಬದುಕುತ್ತಿದ್ದೆ! ಬಾರಿಸಲಿ ನಮ್ಮ ಹುಡುಗರು ಕನ್ನಡ ಡಿಂಡಿಮವ! ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು ಕನ್ನಡ ಚಿತ್ರರಂಗ ರಾಯರ ದಯೆಯಿಂದ ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಲಿ ಎಂದು ಆಶಿಸುವೆ..ಶುಭಮಸ್ತು ಎಂದು ಹೇಳಿದ್ದಾರೆ.

   ಜೊತೆಗೆ, ಕನ್ನಡ ಚಿತ್ರರಂಗದ ಕಲಾವಿದರ ಅಭಿಮಾನಿಗಳಿಗೆ ಕಿವಿಮಾತು. ನಿಮ್ಮ ಪ್ರೀತಿ ಇಷ್ಟಪಟ್ಟವರ ಮೇಲೆ ಪ್ರಶಂಸನೀಯ!ಯಾವುದೇ ಕಾರಣಕ್ಕೂ ಪರಸ್ಪರ ತೆಗಳಿಕೆ ಬೇಡ ಕಾರಣ ಎಲ್ಲಾ ನಟರು ಕನ್ನಡಮ್ಮನ ತೇರನ್ನು ಅವರ ಶಕ್ತ್ಯಾನುಸಾರ ಎಳೆಯುತ್ತಿದ್ದಾರೆ! ಕನ್ನಡಿಗನ ನಿಜಧರ್ಮ ಕನ್ನಡದ ಸೇವಕರಿಗೆ ಭುಜತಟ್ಟುವುದು  ಕನ್ನಡಿಗ ಕನ್ನಡಿಗನನ್ನು ತೆಗಳಿದರೆ ನಮ್ಮನ್ನು ನಾವೇ ಅವಮಾನಿಸಿದಂತೆ ಎಂದು ಕಿವಿಮಾತು ಹೇಳಿದ್ದಾರೆ. 

   ಕುರುಕ್ಷೇತ್ರ ಚಿತ್ರವು ಅದ್ದೂರಿಯಾಗಿ ಪ್ರದರ್ಶನವಾಗುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಇತಿಹಾಸ ನಿರ್ಮಿಸಿ ನೂರು ಕೋಟಿ ದಾಟಿ ಮುನ್ನುಗ್ಗುತ್ತಿದೆ.