ಅನಾವಶ್ಯಕವಾಗಿ ವಸ್ತುಗಳ ಖರೀದಿ ಬೇಡ : ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ

ಅನಾವಶ್ಯಕವಾಗಿ ವಸ್ತುಗಳ ಖರೀದಿ ಬೇಡ : ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ Don't buy things unnecessarily: Additional District Collector Sajid Mulla

ಲೋಕದರ್ಶನ ವರದಿ 

ಕಾರವಾರ, ಮಾ.16 :- ದಿನನಿತ್ಯದ ಜೀವನದಲ್ಲಿ ಪ್ರತಿಯೊಬ್ಬರೂ ಗ್ರಾಹಕರೇ ಆಗಿದ್ದಾರೆ. ಆಧುನಿಕ ಕಾಲದಲ್ಲಿ ವ್ಯವಹಾರ ಬಹಳ ವಿಸ್ತಾರಗೊಂಡಿದ್ದು, ಮನೆಯಲ್ಲೇ ಕುಳಿತುಕೊಂಡು ವಿಶ್ವ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಲಾಗುತ್ತಿದೆ.  ಇತರರಿಗೆ ಪ್ರದರ್ಶಿಸಲು ಅನಾವಶ್ಯಕವಾಗಿ ವಸ್ತುಗಳನ್ನು ಖರೀದಿಸದೆ, ಅಗತ್ಯ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ವಸ್ತುಗಳನ್ನು ಖರೀದಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು. 

ಅವರು ಸೋಮವಾರ ಕಾರವಾರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಕಾರವಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಇಲಾಖೆ, ಕರ್ನಾಟಕ ಆಹಾರ ನಿಗಮ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು (ಆಂತರಿಕ ಗುಣಮಟ್ಟ ಭರವಸೆ ಕೋಶ) ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಯುವ ಪೀಳಿಗೆ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ಹೆಚ್ಚಾಗಿ ಮೋಸ ಮತ್ತು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ವಸ್ತುಗಳನ್ನು ಖರೀದಿಸುವ ಮೊದಲು ಅದರ ಮೌಲ್ಯ, ಗುಣಮಟ್ಟ, ಬೆಲೆ ಮತ್ತು ಸೇವೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿ. ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಅನಾವಶ್ಯಕವಾಗಿ ರೀಲ್ಸ್‌ ವೀಕ್ಷಣೆ ಮಾಡುವುದನ್ನು ಕಡಿಮೆ ಮಾಡಿ ಜ್ಞಾನವರ್ಧಕ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ಹಾಗೂ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರಿಂದ ಉತ್ತಮ ಗ್ರಾಹಕರಾಗಲು ಸಾಧ್ಯ ಎಂದು ಹೇಳಿದರು. 

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಪ್ಪ ಗೌಳಿ ಮಾತನಾಡಿ, ಬ್ಯಾಂಕ್ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿ, ಸರ್ಕಾರ ವಿವಿಧ ಯೋಜನೆಗಳನ್ನು ಬ್ಯಾಂಕ್‌ಗಳ ಮೂಲಕ ತಮಗೆ ಒದಗಿಸಲಾಗುತ್ತಿದೆ. ಬ್ಯಾಂಕ್‌ನಿಂದ ಕರೆ ಮಾಡುತ್ತಿರುವುದು ಎಂದು ವಂಚಕರು ಹೇಳಿ, ಡಿಜಿಟಲ್  ಆರೆಸ್ಟ್‌, ಒಟಿಪಿ, ಕೆವೈಸಿ, ಯುಪಿಐ, ವಹಿವಾಟು ಸಂಬಂಧಿಸಿದ ಕರೆಗಳು ಬಂದಲ್ಲಿ ಕೂಡಲೇ  ಜಾಗೃತರಾಗಬೇಕು.  ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಮಾಹಿತಿಗಳನ್ನು ಹಚ್ಚಿಕೊಳ್ಳಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಪಿಕೆ ಲಿಂಕ್‌ಗಳ ತೆರೆಯಬಾರದು. ಪಬ್ಲಿಕ್ ವೈಪೈ, ಚಾರ್ಜರ್ ಬಳಸಬಾರದು. ಬ್ಯಾಂಕ್ ಖಾತೆ ಪ್ರತಿಯೊಬ್ಬರ ಭವಿಷ್ಯದ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಲೋನ್ ಪಡೆಯಲು ಪಿಎಂ ವಿದ್ಯಾಲಕ್ಷ್ಮೀ ಪೋರ್ಟಲ್ ಮೂಲಕ ಬ್ಯಾಂಕ್‌ನಲ್ಲಿ  ಅರ್ಜಿ ಸಲ್ಲಿಸಬಹುದು ಎಂದರು. 

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹೇಮಲತಾ ಕೆ ಮಾತನಾಡಿ, ಈ ವರ್ಷ “ಸುರಕ್ಷಿತ ಉತ್ಪನ್ನಗಳುಹಿಆತ್ಮವಿಶ್ವಾಸದ ಗ್ರಾಹಕರು” ಎಂಬ ಘೋಷವಾಕ್ಯದೊಂದಿಗೆ ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸುರಕ್ಷಿತವಾದ ಮತ್ತು ನಂಬಿಕೆಯುಕ್ತ ವಸ್ತುಗಳನ್ನು ಖರೀದಿಸುವ ಸ್ವಾತಂತ್ರ್ಯ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರೂ ರಕ್ಷಣೆಯ ಹಕ್ಕು, ಮಾಹಿತಿ ಹಕ್ಕು, ಆಯ್ಕೆಯ ಹಕ್ಕು, ಪರಿಹಾರದ ಹಕ್ಕು ಸೇರಿದಂತೆ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಟರು ಪ್ರದರ್ಶಿಸುವ ಜಾಹೀರಾತುಗಳನ್ನು ನಂಬಿ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳಿದರು. 

ಯಾವುದೇ ವಸ್ತುಗಳನ್ನು ಖರೀದಿಸುವಾಗ ಅದರ ಗುಣಮಟ್ಟ, ಬೆಲೆ ಮತ್ತು ಅವಧಿಯನ್ನು ಗಮನಿಸಬೇಕು. ಮೋಸವಾಗಿರುವುದು ತಿಳಿದ ತಕ್ಷಣ ಸೂಕ್ತ ದಾಖಲೆಗಳೊಂದಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದರೆ ಮೂರು ತಿಂಗಳೊಳಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಗ್ರಾಹಕರ ಹಿತ ಕಾಯುವ ಉದ್ದೇಶದಿಂದಲೇ ಆಯೋಗ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಾರುತಿ ವಡ್ಡರ ತಿಳಿಸಿದರು. 

 ಈ ಸಂದರ್ಭದಲ್ಲಿ ಗ್ರಾಹಕರ ಸಹಾಯವಾಣಿ ಸಂಖ್ಯೆಗಳ ಫಲಕವನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ನೈನಾ ಅಶೋಕ ಕಾಮಟೆ, ಕಾನೂನು ಮಾಪನ ಸಹಾಯಕ ನಿಯಂತ್ರಕ ದೇವರಾಜ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ರೇವಣ್ಕಕರ್ ಸ್ವಾಗತಿಸಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಲಪ್ಪ ಜೋಗಣ್ಣ ಕಾರ್ಯಕ್ರಮ ನಿರೂಪಿಸಿದರು. ಕೆಎಫ್‌ಸಿಸಿ ವ್ಯವಸ್ಥಾಪಕಿ ವಿಜಯ ನಾಯಕ ವಂದಿಸಿದರು.