ಮಳೆಗಾಲ ಜೋರಾಗಿಯೇ ಇದೆ. ಎಲ್ಲಿ ನೋಡಿದರೂ ನೀರು ತುಂಬಿಕೊಂಡಿದೆ. ಒಂದು ದಿನ ಮಳೆ ಕಡಿಮೆ ಆದಂತೆ ಕಂಡರೂ ಅದರ ಮಾರನೇ ದಿನ ಜೋರಾದ ಮಳೆ ಬಂದು ಮನುಷ್ಯ ಬದುಕನ್ನೇ ಮೇಲೆ ಕೆಳಗೆ ಮಾಡಲು ನೋಡುತ್ತಿದೆ. ಇದೆಲ್ಲ ಪ್ರಕೃತಿಯ ನಿಯಮ. ಆಕೆ ಮುನಿದಿದ್ದಾಳೋ, ಕಣ್ಣೀರಿಡುತ್ತಿದ್ದಾಳೋ, ನಮ್ಮದೇ ತಪ್ಪಿನ ಫಲವೋ ಏನಾದರೂ ಇರಲಿ. ಆದರೆ ಮಳೆಯಿಂದ ಸಂಕಷ್ಟಗಳು ಬಂದಿರುವುದು ನಿಜ. ಆ ಕಷ್ಟಗಳಿಂದ ಬೇಸರವಾಗುತ್ತಿರುವುದು ಒಂದು ಕಡೆಯಾದರೆ ನಮ್ಮ ಜನವೇ ನಮ್ಮವರನ್ನು ಜರಿಯುತ್ತಿರುವುದು ಮತ್ತೊಂದು ಕಡೆ.
ಯುವಜನಾಂಗ ಶರಹವನ್ನು ಸೇರಿರುವುದು ಇಂದು ನಿನ್ನೆಯಲ್ಲ. ಎಲ್ಲಿ ಉದ್ಯೋಗ ಸಿಗುತ್ತದೆಯೋ, ಎಲ್ಲಿ ಊಟ ಸಿಗುತ್ತದೆಯೋ, ಎಲ್ಲಿ ಬದುಕಲು ಅವಕಾಶಗಳು ಹೆಚ್ಚಿಗೆ ಇದೆಯೋ ಅಲ್ಲಿಗೆ ಜನ ದೌಡಾಯಿಸುವುದು ಸಹಜ. ಅದರಂತೆ ಬೆಂಗಳೂರಿನತ್ತ ಸಾಕಷ್ಟು ಜನರು ಹೊರಟುಹೋಗಿದ್ದಾರೆ. ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಹಳ್ಳಿಗಳು ವೃದ್ಧಾಶ್ರಮವಾಗಿದೆ ಎನ್ನುವ ಮಾತೂ ಇದೆ. ಆದರೂ ಹಿರಿಯರು ತಮ್ಮ ಮಕ್ಕಳು ದುಡಿದು ಸಂಪಾದಿಸಿಕೊಳ್ಳಲಿ ಎಂದು ಬಯಸಿದಾಗಲೇ ತಾನೆ ಯುವಕರು ಊರು ಬಿಟ್ಟು ಶಹರ ಸೇರಿದ್ದು. ಅದನ್ನು ಕೆಲವರು ಮರೆತಂತಿದೆ.
ಹಳ್ಳಿ ಹುಡುಗರು ಪೇಟೆ ಸೇರಿ ಕೆಟ್ಟು ಹೋದರು, ಎಲ್ಲರೂ ಬೆಂಗಳೂರು ಸೇರಿಕೊಂಡರು, ಇಲ್ಲಿಲ್ಲದ ಸುಖ ಅಲ್ಲೇನಿದೆ? ಎಂದು ಕೇಳುವ ಜನ ಹೆಚ್ಚು ಸಿಗುತ್ತಾರೆ. ನಿಜ ಪರಿಸರ ದೃಷ್ಟಿಯಿಂದ, ನೆಮ್ಮದಿಯ ದೃಷ್ಟಿಯಿಂದ ಹಳ್ಳಿಯ ಬದುಕು ಬಹಳವೇ ಸುಂದರ. ಆದರೆ ಅವೆರಡನ್ನೇ ನಂಬಿ ಬದುಕು ಕಟ್ಟಿಕೊಳ್ಳುವುದು ಕಷ್ಟ. ಯಾಕೆಂದರೆ ಆರ್ಥಿಕ ಸಬಲತೆ ಇಲ್ಲದೇ ಹೋದಲ್ಲಿ ನೆಮ್ಮದಿ ಕೆಡುತ್ತದೆ. ಹಾಗಾಗಿ ಯೌವನದ ಕಾಲದಲ್ಲಿ ದುಡಿಮೆ ಬಹಳ ಮುಖ್ಯ ಎನ್ನಿಸುತ್ತದೆ.
ಉದ್ಯಮನಗರವಾಗಿ ಎದ್ದು ನಿಂತ ಬೆಂಗಳೂರಿನಲ್ಲಿ ಯಾರೇ ಹೋದರು ತನ್ನೊಳಗೆ ಬಾಚಿಕೊಂಡು ಕೆಲಸ ಕೊಡುತ್ತಿದೆ. ಹಾಗಾಗಿ ಕೂಲಿಯವನಿಂದ ಇಂಜೀನಿಯರ್‌ವರೆಗಿನ ಎಲ್ಲ ಜನ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿದ್ದಾರೆ. ಅಲ್ಲಿ ನೆಲೆಸಿದರು ಎಂದ ಮೇಲೆ ಮನೆ, ಕಾರು, ಶಾಲೆ ಕಾಲೇಜು, ಅದಕ್ಕೆ ಪೂರಕವಾದ ಮೂಲ ಭೂತ ಸೌಕರ್ಯಗಳು ಬೇಕೇ ಬೇಕು. ಅದಕ್ಕಾಗಿ ಬೆಂಗಳೂರು ವಿಸ್ತರನೆ ಆಗುತ್ತ ಹೋಗಿದೆ. ಇಂದು ಕಂಡಂತೆ ಆ ಊರು ನಾಳೆ ಕಾಣುವುದಿಲ್ಲ. ಹಾಗಾಗಿ ಬೆಂಗಳೂರು ಬೃಹತ್ ನಗರವಾಗಿ ಬೆಳೆದು ನಿಂತಿದೆ.
ಈಗ ಅಲ್ಲಿ ಅತೀಯಾದ ಮಳೆ ಬೀಳುತ್ತಿದೆ. ಮನೆ, ರಸ್ತೆ ಅನ್ನದೇ ನೀರು ತುಂಬಿಕೊಳ್ಳುತ್ತಿದೆ. ಬದುಕು ನೀರಿನ ಮಧ್ಯವೇ ನಿಂತಿದೆ. ಕಷ್ಟ ಎದುರಾಗಿದೆ. ಅದನ್ನು ಕಂಡ ಕೆಲವರು ನಮ್ಮ ರಾಜಧಾನಿಯ ಬಗ್ಗೆ ಕೇವಲವಾಗಿ ಮಾತನಾಡುವುದು ಕೆಲವು ಕಡೆ ನೋಡಿದೆ. ಅಲ್ಲಿಯ ಆಡಳಿತದಲ್ಲಿ ವೈಫಲ್ಯ ತುಂಬಿರುವುದು ಈ ಮಳೆಯ ನೀರಿನ ಸಂಕಷ್ಟಕ್ಕೆ ಮೂಲ ಕಾರಣ ಆಗಿದೆ ಎನ್ನುವದು ಗೊತ್ತಿದ್ದರೂ ಬೆಂಗಳೂರು ಸರಿ ಇಲ್ಲ ಎನ್ನುವದು ಒಪ್ಪಲಾಗದು. ತಮ್ಮ ಮಕ್ಕಳಿಗೆ ಕಷ್ಟ ಇದೆ ಅಂದಾಗ ಬೆಂಗಳೂರು ಸರಿ ಇಲ್ಲ ಎಂದು ಹೇಳುವ ಮಾತು ಸರಿಯಲ್ಲ. ಅದಕ್ಕಿಂತ ಕೆಲವರು ಹೊರರಾಜ್ಯದಿಂದ ಇಲ್ಲಿಗೆ ಬಂದು ನೆಲೆಸಿ ಕರ್ನಾಟಕದ ಶಿರ ಎನ್ನುವಂತಿರುವ ಆ ಊರನ್ನು ಅಪಪ್ರಚಾರ ಮಾಡುತ್ತಿರುವುದು ಯಾತಕ್ಕೆ ಅಂತ ತಿಳಿಯುತ್ತಿಲ್ಲ.
ನಿನ್ನೆ ತಾನೆ ನಾನು ಬೆಂಗಳೂರಿಗೆ ಹೋಗಿ ಬಂದಾಯ್ತು. ಮಳೆ ಬಂದಾಗ ನೀರು ತುಂಬಿದ್ದು ಬಿಟ್ಟರೆ ಅಲ್ಲಿಯ ಜನರಿಗೆ ಆ ಊರನ್ನು ಬಿಟ್ಟು ಬರಲು ಮನಸ್ಸಿಲ್ಲ. ಇದು ನಮ್ಮ ಊರು ಎಂದೇ ಅವರು ಹೇಳುವುದು. ಎಲ್ಲರಿಗೂ ನಮ್ಮ ಮನೆ, ನಮ್ಮ ಊರು ಎನ್ನುವ ಸ್ವಾಭಿಮಾನ, ಪ್ರೀತಿ ಇದ್ದೇ ಇರುತ್ತದೆ. ಇದನ್ನು ನಾವು ಅರಿತುಕೊಳ್ಳಬೇಕು. ಅದರ ಬದಲಾಗಿ ನಮ್ಮ ಊರು ಶ್ರೇಷ್ಠ ಪರವೂರು ಸರಿ ಇಲ್ಲ ಎನ್ನುವದು ಯಾವಕಾರಣಕ್ಕೂ ಒಳ್ಳೆಯ ಮಾತಲ್ಲ. ಮೂಲದಿಂದ ನೆಲೆಸಿರುವ ಊರಿನವರಿಗೆ ಅದು ಬೇಸರ ಖಂಡಿತ ತರುತ್ತದೆ. ನನಗೆ ನನ್ನ ಹಳ್ಳಿ ಸುಂದರ ಮತ್ತು ಇಷ್ಟ. ಇನ್ನೊಬ್ಬನಿಗೆ ಅನ್ನ ಕೊಟ್ಟ ಶಹರ ಇಷ್ಟ. ಹಾಗಾಗಿ ಯಾರನ್ನು ತುಚ್ಛವಾಗಿ ಕಾಣುವುದು ಸರಿಯಲ್ಲ.
ಕೆಲವೇ ದಿನಗಳ ಹಿಂದೆ ಕೊರೋನಾ ಬಂದು ಜಗತ್ತೇ ಲಾಕ್‌ಡೌನ್ ಆಗಿತ್ತು. ಆಗ ಬಂದ ಕಷ್ಟ ಎಂಥದ್ದು ಎನ್ನುವದು ಎಲ್ಲರಿಗೂ ಗೊತ್ತು. ಶಹರ ಹಳ್ಳಿ ಎನ್ನದೇ ಸುತ್ತಿಕೊಂಡ ಆ ರೋಗವನ್ನು ಎಲ್ಲರೂ ಭಯದಿಂದಲೇ ಎದುರಿಸಿದರು. ಹಳ್ಳಿ ಸುರಕ್ಷಿತ ಎನ್ನುವವರನ್ನು ಬಿಟ್ಟಿತೆ! ಇಲ್ಲವಲ್ಲ. ಹಳ್ಳಿಗೆ ಯಾವುದೇ ರೂಪದಲ್ಲಿ ಕೊರೋನಾ ಹೆಜ್ಜೆ ಇಟ್ಟಿರಬಹುದು. ಆದರೆ ಎಲ್ಲ ಕಡೆಯೂ ಹರಡಿದ ಆ ರೋಗವನ್ನು ನಾವು ಒಂದು ಊರನ್ನು ಪಾಯಿಂಟ್ ಮಾಡಿ ತೋರಿಸಲು ಸಾಧ್ಯವಾಗುವುದೇ ಇಲ್ಲ.
ನನ್ನ ಪರಿಚಯದವರು ಒಬ್ಬರು ಬೆಂಗಳೂರಿನಲ್ಲಿ ಇದ್ದರು. ಅವರಿಗೆ ಲಕ್ಷದ ಹತ್ತಿರ ಸಂಬಳ ಬರುತಿತ್ತು. ಹಳ್ಳಿಯಲ್ಲೂ ಅನುಕೂಲಸ್ಥರು. ಎಲ್ಲವೂ ಚೆನ್ನಾಗಿತ್ತು. ಕೊರೋನಾ ಬಂದು ಲಾಕ್‌ಡೌನ್ ಆಯ್ತು. ಆಗ ಪೇಟೆಯಲ್ಲಿ ಬದುಕುವುದು ಕಷ್ಟ. ಮನೆಯಿಂದ ಒಂದು ಹೆಜ್ಜೆ ಇಡಲಿಕ್ಕೆ ಆಗಲಿಲ್ಲ. ಹಾಗಾಗಿ ಬೆಂಗಳೂರು ಬಿಟ್ಟು ಹಳ್ಳಿಗೆ ಬಂದೆವು ಎಂದರು. ಹಣಕ್ಕೆ ಕೊರತೆ ಇಲ್ಲ. ತಂದೆ ತಾಯಿಗೂ ವಯಸ್ಸಾಗಿದೆ. ಕೊರೊನಾ ಸಮಯದಲ್ಲೇ ಊರಿಗೆ ಬಂದು ನೆಲೆಸುವಂತಾಯ್ತು ಅಂತ ಅವರ ತಂದೆ ತಾಯಿ ಖುಷಿ ಪಟ್ಟರು. ಆದರೆ ಈಗ ಎಲ್ಲವೂ ಸರಿ ಹೋಗಿದೆ. ಬೆಂಗಳೂರು ಯಥಾಸ್ಥಿತಿಗೆ ಮರಳಿದೆ. ಈ ಜನ ಮೊದಲು ಹಳ್ಳಿಯಲ್ಲೇ ಉಳಿಯುತ್ತೇವೆ ಎಂದು ಬಂದವರು ತಿರುಗಿ ಬೆಂಗಳೂರು ಹೋಗಿಬಿಟ್ಟರು. ಯಾಕೆ ಹಾಗೆ ಮಾಡಿದರಿ ಎಂದು ಕೇಳಿದರೆ ಹಳ್ಳೀಯಲ್ಲಿ ಏನು ಸಿಗುತ್ತದೆ. ಮೂರು ಹೊತ್ತು ಹಸಿರು ನೋಡುತ್ತ ಕೂರಲು ಆಗುವುದಿಲ್ಲ, ಹಳ್ಳಿಯಲ್ಲಿ ನನಗೆ ಬೇಕಾದ ಕೆಲಸ ಇಲ್ಲ. ತೋಟ ನೋಡಿಕೊಳ್ಳಲು ಚಿಕ್ಕಪ್ಪನಿಗೆ ಹೇಳಿದ್ದೇನೆ. ಮನೆಯಲ್ಲಿ ಅಡುಗೆಗೆ ಒಬ್ಬಾಕೆಯನ್ನು ನೇಮಿಸಿದ್ದೇನೆ. ಅಪ್ಪ ಅಮ್ಮ ಖುಷಿಯಲ್ಲಿ ಇದ್ದಾರೆ. ಬೆಂಗಳೂರು ಬಿಟ್ಟು ಅಲ್ಲಿಗೆ ಬಂದರೆ ನಮಗೆ ಕಷ್ಟ ಅಂತೆಲ್ಲ ಹೇಳಿದರು.
ಅಂದರೆ ಇಂಥವರಿಗೆ ಯಾವ ಊರು ತಮ್ಮದು, ಯಾವ ಊರನ್ನು ನಾವು ಪ್ರೀತಿಸಬೇಕು ಎನ್ನುವ ಗೊಂದಲ ಇದ್ದಂತಿದೆ. ಅವರ ಅನುಕೂಲಕ್ಕೆ ತಕ್ಕಂತೆ ಅವರ ಊರಾಗುವುದೇನೋ ಅನ್ನಿಸುವುದು. ಹುಟ್ಟಿದ ಊರು ಅನ್ನ ಕೊಟ್ಟ ಊರು ಎಲ್ಲವೂ ನಮ್ಮದೇ ಹಾಗಿರುವಾಗ ಕಷ್ಟ ಬಂದಾಗ ಆ ಊರನ್ನು ಬೈದು ಮತ್ತೊಂದು ಊರಿಗೆ ಹೋಗಬೇಕೆಂದಿಲ್ಲ. ಇದ್ದಲ್ಲೆ ಕಷ್ಟ ಎದುರಿಸಲಿ. ಆಗಲಿಲ್ಲವೋ ಎಲ್ಲಿ ಸುಖವೋ ಅಲ್ಲಿಗೆ ಹೋಗಲಿ. ಆದರೆ ಯಾವ ಊರನ್ನು ತುಚ್ಛವಾಗಿ ಕಾಣುವುದು ಬೇಡ. ಯಾಕೆಂದರೆ ಅಲ್ಲಿಯ ಮೂಲ ನಿವಾಸಿಗಳಿಗೆ ಅದು ಅವರ ಸ್ವಂತ ಊರಾಗಿರುತ್ತದೆ. ನೆನಪಿರಲಿ...
- * * * -