ಕೊಪ್ಪಳ 17: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಎಂಎಸ್‌ಪಿಎಲ್ (ಬಿಎಸ್‌ಪಿಎಲ್) ಕಾರ್ಖಾನೆಯು ವಿಸ್ತರಣೆಯ ಹಂತದಲ್ಲಿ ಮತ್ತೊಂದು ಬೃಹತ್ ಮಟ್ಟದ ಕಾರ್ಖಾನೆಯನ್ನು ನಿರ್ಮಿಸಲು ಹೊರಟಿರುವುದನ್ನು ವಿರೋಧಿಸಿ ಸೋಮವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಮಾತನಾಡಿ ಕೊಪ್ಪಳ ಜಿಲ್ಲಾ ಕೇಂದ್ರದ ಕೂಗಳೆತೆ ದೂರದಲ್ಲಿ ನೂರಾರು ಕಾರ್ಖಾನೆಗಳು ಸ್ಥಾಪಿತಗೊಂಡು ದಶಕಗಳು ಕಳೆದಿವೆ. ಕಾರ್ಖಾನೆಗಳಿಂದ ಹೊರಸೂಸುವ ತ್ಯಾಜ್ಯದಿಂದ ಸುತ್ತಮುತ್ತಲಿನ ಗ್ರಾಮಗಳ ಜನಜೀವನ, ಜಾನುವಾರುಗಳು ಹಾಗೂ ಪ್ರಾಣಿ ಪಕ್ಷೀಗಳಿಗೆ ಮಾರಕವಾಗಿ ಪರಿಣಮಿಸಿದೆ. ವಿಶೇಷವಾಗಿ ಜನರ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರಿದ್ದು, ರೈತರ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ಇಷ್ಟಾದರೂ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಎಂಎಸ್‌ಪಿಎಲ್ (ಬಿಎಸ್‌ಪಿಎಲ್) ಕಾರ್ಖಾನೆಯು ವಿಸ್ತರಣೆಯ ಹಂತದಲ್ಲಿ ಮತ್ತೊಂದು ಬೃಹತ್ ಮಟ್ಟದ ಕಾರ್ಖಾನೆಯನ್ನು ನಿರ್ಮಿಸಲು ಹೊರಟಿರುವುದನ್ನು ಖಂಡನಾರ್ಹ. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವನ್ನೇ ಸ್ಥಳಾಂತರ ಮಾಡುವ ಪರಿಸ್ಥಿತಿ ಎದರಾಗಬಹುದು. ಜೊತೆಗೆ ಈಗಾಗಲೇ ಇರುವ ಕಾರ್ಖಾನೆಗಳಿಗೂ ಯಾವುದೇ ವಿಸ್ತರಣೆಗೆ ಅನುಮತಿಯನ್ನು ಸರ್ಕಾರ ನೀಡಬಾರದು. ಸಾಮಾನ್ಯವಾಗಿ ಜನವಸತಿ ಪ್ರದೇಶದ ವ್ಯಾಪ್ತಿಯಲ್ಲಿ ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವುದಕ್ಕೆ ಅವಕಾಶವಿಲ್ಲ. ಈ ಬೃಹತ್ ಕಾರ್ಖಾನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದು, ಜಿಲ್ಲಾಡಳಿತ ಭವನ, ಅಗ್ನೀಶಾಮಕ ಕಛೇರಿ, ಹಾಗೂ ಹಲವು ಸರ್ಕಾರಿ ಕಛೇರಿಗಳ ಕೂಗಳೆತೆಯ ದೂರದಲ್ಲಿದೆ. ಕಾರ್ಖಾನೆಗಳು ಸ್ಥಾಪನೆ ಹಾಗೂ ವಿಸ್ತರಣೆಗೆ ಸಾಕಷ್ಟು ವ್ಯತಿರಿಕ್ತವಾದ ವಿರೋಧಗಳಿದ್ದು, ಈ ಕೂಡಲೇ ಸರ್ಕಾರಕ್ಕೆ ವರದಿ ನೀಡಿ ಈ ಬೃಹತ್ ಕಾರ್ಖಾನೆಯ ವಿಸ್ತರಣೆಯನ್ನು ತಡೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಕುಕನೂರು ತಾಲೂಕಾಧ್ಯಕ್ಷ ರಮೇಶ ಚಂಡೂರು, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ಗೊಂಡಬಾಳ ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ ನಾಗರಳ್ಳಿ, ಮುಖಂಡರಾದ ಸಂಜೀವಸಿಂಗ್ ಹಜಾರೆ, ಪರಮೇಶ್ವರ್ಪ ಉಪ್ಪಿನ್, ವೆಂಕಟೇಶ ತಟ್ಟಿ, ಮಂಜುನಾಥ ಗೊಂಬಿ, ಮಹ್ಮದರಫಿ ನದಾಪ್, ಅಶ್ವಥ ರಾಯದುರ್ಗ, ವಿರೇಶ ಎಸ್.ಎಮ್, ವಿನೋದ ಗೊಂದಕರ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವನ್ನೇ ಸ್ಥಳಾಂತರ ಮಾಡುವ ಪರಿಸ್ಥಿತಿ ಎದರಾಗಬಹುದು. ಜೊತೆಗೆ ಈಗಾಗಲೇ ಇರುವ ಯಾವುದೇ ಕಾರ್ಖಾನೆಗಳಿಗೂ ವಿಸ್ತರಣೆಗೆ ಅನುಮತಿಯನ್ನು ಸರ್ಕಾರ ನೀಡಬಾರದು.
-ಬಿ.ಗೀರೀಶಾನಂದ ಜ್ಞಾನಸುಂದರ
ಕರವೇ ಜಿಲ್ಲಾಧ್ಯಕ್ಷರು