ಫೆ. 22 ರಂದು ಶ್ವಾನ ಪ್ರದರ್ಶನ, ಫೆ. 24 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
Dog show on Feb. 22, district level job fair on Feb. 24
ಲೋಕದರ್ಶನ ವರದಿ
ಫೆ. 24 ರಿಂದ 28 ವರೆಗೆ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜನೆ: ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ
ಧಾರವಾಡ ಫೆ.21: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಹಾಗೂ ಶ್ವಾನ ಪ್ರದರ್ಶನ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಕಾರ್ಯಕ್ರಮಗಳನ್ನು ನಾಳೆ (ಫೆ.22) ಯಿಂದ ಫೆಬ್ರವರಿ 28 ವರೆಗೆ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅವರು ಇಂದು (ಫೆ.21) ಬೆಳಿಗ್ಗೆ ಜಿಲ್ಲಾ ಪಂಚಾಯತ (ವಿಡಿಯೋ ಕಾನ್ಫರೆನ್ಸ್ ಹಾಲ್) ದಲ್ಲಿ ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಕರ್ನಾಟಕ ಪಶುವೈದ್ಯಕೀಯ ಸಂಘ, ಹುಮ್ಮೇನ್ ವರ್ಲ್ಡ ಫಾರ್ ಅನಿಮಲ್ಸ್ ಹಾಗೂ ಇತರೆ ಎನ್.ಜಿ.ಓ. ಗಳ ಸಂಯುಕ್ತಾಶ್ರಯದಲ್ಲಿ ನಾಳೆ (ಫೆ.22) ಬೆಳಿಗ್ಗೆ ಶ್ವಾನ ಪ್ರದರ್ಶನ ಹಾಗೂ ಬೀದಿ ನಾಯಿ ಮರಿಗಳ ದತ್ತು ಸ್ವೀಕಾರ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು
ನಾಳೆ (ಫೆ.22) ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕರ್ನಾಟಕ ಕಾಲೇಜು (ಕೆಸಿಡಿ) ಆವರಣದಲ್ಲಿ ಶ್ವಾನ ಪ್ರದರ್ಶನ ಹಾಗೂ ಶ್ವಾನ ಮರಿಗಳ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಉದ್ಘಾಟಿಸುವರು ಎಂದು ಅವರು ಹೇಳಿದರು.
ಶ್ವಾನ ಪ್ರದರ್ಶನಕ್ಕೆ ಶ್ವಾನಗಳ ಮಾಲೀಕರು ಈಗಾಗಲೇ 150 ಕ್ಕೂ ಹೆಚ್ಚು ಶ್ವಾನಗಳ ನೋಂದಣಿ ಮಾಡಿದ್ದಾರೆ, ವಿವಿಧ ಜಾತಿ ಮತ್ತು ವರ್ಗಗಳ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ. ಶ್ವಾನಗಳ ಆರೋಗ್ಯ, ಸೌಂದರ್ಯ, ಶಿಸ್ತು ಮತ್ತು ಪ್ರದರ್ಶನ ಕೌಶಲ್ಯಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿ, ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.
ದತ್ತು ಪಡೆಯಲ್ಪಡುವ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ, ವಿವಿಧ ರೋಗಗಳ ವಿರುದ್ಧ ಕಂಬೈಂಡ್ ವ್ಯಾಕ್ಸಿನ್, ಜಂತುನಾಶಕ ಓಷಧಿ, ನೆಕ್ ಬೆಲ್ಟ್-ಲೀಷ್, ಪ್ರಾರಂಭಿಕ ಪರಿಕರಗಳ ಕಿಟ್, ಒಂದು ವರ್ಷದೊಳಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಗುವುದು ಮತ್ತು ರೇಬಿಸ್ ತಿಳುವಳಿಕೆ ಕರಪತ್ರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಇತ್ತೀಚೆಗೆ ಸರ್ಕಾರೇತರ ಸಂಸ್ಥೆಗಳ ಮೂಲಕ ಕೈಗೊಂಡ ಸಮೀಕ್ಷೆಯ ದತ್ತಾಂಶಗಳ ಪ್ರಕಾರ ಧಾರವಾಡ ಜಿಲ್ಲೆಯ ನಗರ ಪ್ರದೇಶಗಳಲ್ಲಿ 15,318 ಸಾಕು ನಾಯಿಗಳು ಮತ್ತು 31,018 ಬೀದಿ ನಾಯಿಗಳು ಇದ್ದು, ಗ್ರಾಮೀಣ ಪ್ರದೇಶಗಳಲ್ಲಿ 3,030 ಸಾಕು ನಾಯಿಗಳು ಹಾಗೂ 5,817 ಬೀದಿ ನಾಯಿಗಳು ಇರುವುದಾಗಿ ತಿಳಿದುಬಂದಿದೆ ಎಂದು ಅವರು ಹೇಳಿದರು.
2024 ರಲ್ಲಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನ ಕಾರ್ಯಕ್ರಮದಲ್ಲಿ 130 ಶ್ವಾನಗಳು ಪ್ರದರ್ಶನಕ್ಕೆ ನೋಂದಣಿಯಾಗಿದ್ದವು. 25 ತಳಿಗಳ ಶ್ವಾನಗಳು ಭಾಗವಹಿಸಿದ್ದವು. ಭಾಗವಹಿಸಿದ್ದ ಎಲ್ಲ ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕೆಯನ್ನು ನೀಡಲಾಗಿತ್ತು. ಮತ್ತು ಉತ್ತಮ ಪ್ರದರ್ಶನ ನೀಡಿದ 75 ಶ್ವಾನಗಳಿಗೆ ಬಹುಮಾನಗಳನ್ನು ವಿತರಿಸಲಾಗಿತ್ತು ಎಂದು ಅವರು ತಿಳಿಸಿದರು.
2024 ರ ಕ್ಕಿಂತ ನಾಳೆಯ 2026 ನೇ ಸಾಲಿನ ಶ್ವಾನ ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯ ಶ್ವಾನಗಳು ಭಾಗವಹಿಸುತ್ತಿದ್ದು, ಮತ್ತು ವಿಶೇಷವಾಗಿ ಇದೇ ಮೊದಲ ಬಾರಿಗೆ ಶ್ವಾನ ಪ್ರದರ್ಶನದಲ್ಲಿ ಪೊಲೀಸ್ ಶ್ವಾನಗಳು ಭಾಗವಹಿಸುತ್ತಿವೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಫೆ. 24 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಕೌಶಲ್ಯ ಮಿಶನ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಹಯೋಗದಲ್ಲಿ ಫೆಬ್ರವರಿ 24 ರಂದು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ಕಾಲೇಜು (ಕೆಸಿಡಿ) ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಫೆ. 24 ರಂದು ಆಯೋಜಿಸಿರುವ ಉದ್ಯೋಗ ಮೇಳಕ್ಕೆ ಈಗಾಗಲೇ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇಳದಲ್ಲಿ ಭಾಗವಹಿಸಲು ಒಟ್ಟು 151 ಕೈಗಾರಿಕೆ, ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ವಿವಿಧ ಶೈಕ್ಷಣಿಕ ಹಿನ್ನಲೆಯ ಆಸಕ್ತ 13,250 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಇದರ ಜೊತೆಗೆ 2,502 ಯುವ ನಿಧಿ ಯೋಜನೆಯ ಫಲಾನುಭವಿಗಳು ಸಹ ಉದ್ಯೋಗ ಬಯಸಿ, ಮೇಳದಲ್ಲಿ ಭಾಗವಹಿಸಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಈ ಉದ್ಯೋಗ ಮೇಳದಲ್ಲಿ 18 ರಿಂದ 45 ವರ್ಷ ವಯೋಮಿತಿಯ ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ, ಐ.ಟಿ.ಐ, ಡಿಪ್ಲೋಮಾ, ಬಿ.ಇ, ಹಾಗೂ ವಿವಿಧ ಬೇರೆ ಬೇರೆ ವಿದ್ಯಾರ್ಹತೆ ಹೊಂದಿದ ಉದ್ಯೋಗಾಕಾಂಕ್ಷಿಗಳು ಮತ್ತು ನಿರುದ್ಯೋಗಿ ಯುವಕ, ಯುವತಿಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಫೆ.24 ರ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲು ನಾಲ್ಕು ಬ್ಲಾಕ್‌ಗಳನ್ನು ರಚಿಸಿ, 21 ಕೊಠಡಿಗಳನ್ನು ಗುರುತಿಸಲಾಗಿದೆ. ಉದ್ಯೋಗಾಕಾಂಕ್ಷಿಗಳ ಸಹಾಯಕ್ಕಾಗಿ ಆರು ಹೆಲ್ಪ್ ಡೆಸ್ಕ್ (ಸಹಾಯ ಕೇಂದ್ರ) ಗಳನ್ನು ಸ್ಥಾಪಿಸಲಾಗುತ್ತಿದೆ. ಸ್ಥಳದಲ್ಲಿಯೇ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸುಮಾರು 20 ನೋಂದಣಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಮತ್ತು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲಾ ಕೈಗಾರಿಕೆ, ಕಂಪನಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಸಿಇಓ ಭುವನೇಶ ಪಾಟೀಲ ತಿಳಿಸಿದರು.
ಮಾರ್ಚ 9, 2025 ರಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 130 ಕೈಗಾರಿಕೆ, ಕಂಪನಿಗಳು ನೋಂದಾಯಿಸಿಕೊಂಡಿದ್ದರು ಮತ್ತು 118 ಉದ್ಯೋಗದಾತರು ಭಾಗವಹಿಸಿದ್ದರು. 9,807 ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳಕ್ಕೆ ಹೆಸರು ನೋಂದಾಯಿಸಿಕೊಂಡು 7,600 ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಹಾಜರಾಗಿದ್ದರು. ಇದರಲ್ಲಿ 532 ಜನ ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡರು. ಉದ್ಯೋಗ ಪಡೆದ 532 ಅಭ್ಯರ್ಥಿಗಳಲ್ಲಿ 485 ಜನ ಕೌಶಲ್ಯ ಆಧಾರಿತ ಉದ್ಯೋಗವನ್ನು ಮತ್ತು 47 ಅಭ್ಯರ್ಥಿಗಳು ಕೌಶಲ್ಯ ರಹಿತ ಉದ್ಯೋಗವನ್ನು ಪಡೆದುಕೊಂಡಿದ್ದರು ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನ 2026 ರ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಉದ್ಯೋಗದಾತರು ಮತ್ತು ಉದ್ಯೋಗ ಆಕಾಂಕ್ಷಿಗಳು ಉತ್ತಮ ಪ್ರತಿಕ್ರಿಯೆ ನೀಡಿ, ಹೆಚ್ಚು ಹೆಸರುಗಳನ್ನು ನೋಂದಾಯಿಸಿದ್ದಾರೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಎಲ್ಲ ಕೈಗಾರಿಕೆ, ಕಂಪನಿಗಳಿಗೆ ಆಹ್ವಾನಿಸಿ, ತಮ್ಮಲ್ಲಿ ಅಗತ್ಯವಿರುವ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ, ಆಯ್ಕೆ ಮಾಡಿಕೊಳ್ಳಲು ವಿನಂತಿಸಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಉದ್ಯೋಗ ಮೇಳದ ಮೂಲಕ ಉದ್ಯೋಗದಾತರಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮವಾದ ಪ್ಲಾಟ್ಫಾರ್ಮ ಮಾಡಿಕೊಡುತ್ತಿವೆ ಎಂದು ಅವರು ತಿಳಿಸಿದರು.
ಯುವನಿಧಿ ಫಲಾನುಭವಿಗಳು, ಉದ್ಯೋಗ ಆಕಾಂಕ್ಷಿಗಳು, ನಿರುದ್ಯೋಗಿ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಉದ್ಯೋಗ ಮೇಳವನ್ನು ಅರ್ಥಪೂರ್ಣಗೊಳಿಸಬೇಕೆಂದು ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.
ಫೆ. 24 ರಿಂದ 28 ವರೆಗೆ ಕುಶಲಕರ್ಮಿಗಳ ಹಾಗೂ ಗುಡಿ ಕೈಗಾರಿಕೆಗಳ ಉತ್ಪನ್ನಗಳ ವಸ್ತುಪ್ರದರ್ಶನ: ಜಿಲ್ಲಾ ಪಂಚಾಯತಯ ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗದಿಂದ 2025-26 ನೇ ಸಾಲಿನ ವಸ್ತುಪ್ರದರ್ಶನ ಯೋಜನೆಯಡಿ ಧಾರವಾಡದ ಕರ್ನಾಟಕ ಕಾಲೇಜ (ಕೆಸಿಡಿ) ಮೈದಾನದಲ್ಲಿ ಫೆಬ್ರವರಿ 24 ರಿಂದ 28, 2026 ರವರೆಗೆ ಜಿಲ್ಲಾ ಮಟ್ಟದ ಕುಶಲಕರ್ಮಿಗಳ ಹಾಗೂ ಗುಡಿ ಕೈಗಾರಿಕೆಗಳ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರಿ್ಡಸಲಾಗಿದೆ ಎಂದು ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಸ್ತು ಪ್ರದರ್ಶನದಲ್ಲಿ ಗ್ರಾಮೀಣ ಭಾಗದ ಕುಶಲಕರ್ಮಿಗಳು ಹಾಗೂ ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ ಸುಮಾರು 50 ರಿಂದ 60 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ ಎನ್‌ಆರ್‌ಎಲ್‌ಎಮ್ ಮತ್ತು ಸಂಜೀವಿನಿ ಒಕ್ಕೂಟ ಯೋಜನೆಯಡಿ ಅನೇಕ ಸ್ತ್ರೀ ಸ್ವಸಹಾಯ ಸಂಘಗಳು ಗ್ರಾಮೀಣ ಗುಡಿ ಕೈಗಾರಿಕೆಗಳನ್ನು ನಡೆಸುತ್ತಿದ್ದು, ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಈ ವಸ್ತುಪ್ರದರ್ಶನ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 