ಬೀಜಿಂಗ್, ಜನವರಿ 25 ,ಚೀನಾದ ವುಹಾನ್ ನಗರದಲ್ಲಿ ಶನಿವಾರ ವೈದ್ಯರೊಬ್ಬರು ಕರೋನವೈರಸ್‌ಗೆ ಬಲಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಹುಬೈ ಕ್ಸಿನ್ಹುವಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 62 ವರ್ಷ ಪ್ರಾಯದ ಲಿಯಾಂಗ್ ವುಡಾಂಗ್ ಅವರಲ್ಲಿ ರೋಗದ ಮೊದಲ ಲಕ್ಷಣಗಳು ಕಂಡುಬಂದ ಎರಡು ದಿನಗಳ ನಂತರ ಜನವರಿ 18 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸೋಂಕಿತ ವೈದ್ಯರ ನೈಜ ಸಂಖ್ಯೆ ನಿರೀಕ್ಷಿಸಿರುವುದಕ್ಕಿಂತ ಹೆಚ್ಚಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಡಿಸೆಂಬರ್ ಅಂತ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ಅಜ್ಞಾತ ರೀತಿಯ ವೈರಲ್ ನ್ಯುಮೋನಿಯಾವನ್ನು ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇತ್ತೀಚೆಗೆ ಕರೋನವೈರಸ್‌ನ ಹೊಸ ತಳಿ ಎಂದು ದೃಢಪಡಿಸಿದೆ, ಪ್ರಸ್ತುತ ಇದನ್ನು 2019-ಎನ್‌ಸಿಒವಿ ಅಥವಾ ನೋವಲ್ ಕೊರೊನಾವೈರಸ್ ಎಂದು ಕರೆಯಲಾಗುತ್ತಿದೆ.ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, 1,287 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ, 41 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಕೊರಿಯಾ, ಜಪಾನ್, ವಿಯೆಟ್ನಾಂ, ಸಿಂಗಾಪುರ್, ಥೈಲ್ಯಾಂಡ್, ಫ್ರಾನ್ಸ್, ನೇಪಾಳ, ಆಸ್ಟ್ರೇಲಿಯಾ ಮತ್ತು ತೈವಾನ್ ದೇಶಗಳಲ್ಲಿಯೂ ಹೊಸ ಕರೋನವೈರಸ್ ಪ್ರಕರಣಗಳು ದೃಢಪಟ್ಟಿವೆ. ಆದಾಗ್ಯೂ, ಜಾಗತಿಕ ತುರ್ತು ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಘೋಷಿಸಿಲ್ಲ.