ವೈದ್ಯರ ಮುಷ್ಕರ 'ಪ್ರತಿಷ್ಠೆಯ ವಿಷಯ'ವಾಗಿ ಮಾಡಬೇಡಿ- ಮಮತಾಗೆ ಡಾ.ಹರ್ಷವರ್ಧನ್ ಆಗ್ರಹ

ನವದೆಹಲಿ, ಜೂನ್ 14:  ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರೊಬ್ಬರ ಮೇಲೆ ನಡೆದ ದಾಳಿಯ ವಿರುದ್ಧ ರಾಷ್ಟ್ರವ್ಯಾಪಿ ವೈದ್ಯರು ನಡೆಸಿದ ಮುಷ್ಕರದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ವೈದ್ಯರಿಗೆ ನೀಡಿರುವ ಅಂತಿಮ ಎಚ್ಚರಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರಿಗೆ ಮನವಿ ಮಾಡಿದ್ದಾರೆ. 

ಸಮಾಜದ ಒಟ್ಟಾರೆ ಹಿತದೃಷ್ಟಿಯಿಂದ ಮುಷ್ಕರವನ್ನು ಅಂತ್ಯಗೊಳಿಸುವಂತೆ ಹರ್ಷವರ್ಧನ್ ವೈದ್ಯ ಸಮುದಾಯಕ್ಕೆ ಕರೆ ನೀಡಿದ್ದಾರೆ.   

 'ವೈದ್ಯರ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಿ ದೇಶಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿರುವುದು ತಮಗೆ ನೋವು ತಂದಿದೆ. ಇದರಿಂದ ರೋಗಿಗಳು ನರಳುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರು ವೈದ್ಯಕೀಯ ಸಮುದಾಯಕ್ಕೆ ನೀಡಿರುವ ಅಂತಿಮ ಎಚ್ಚರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡುತ್ತಿದ್ದೇನೆ. ಹಾಗೆಯೇ ಅವರು ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಬಾರದು 'ಎಂದು ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.   

 ಮುಷ್ಕರವನ್ನು ಕೊನೆಗೊಳಿಸುವಂತೆ ವೈದ್ಯರನ್ನು ಒತ್ತಾಯಿಸಿರುವ ಡಾ.ಹರ್ಷವರ್ಧನ್  ಅವರು, ದೇಶಾದ್ಯಂತ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸುರಕ್ಷಿತ ವಾತಾವರಣ ಒದಗಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.