ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆ

District level progress review meeting of various departments

ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆ 

ವಿಜಯಪುರ 18: ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನಿಗಾವಹಿಸಿ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಯೋಜನೆ ಸಿದ್ಧಪಡಿಸಿಕೊಂಡು       ಮಕ್ಕಳ  ಉಜ್ವಲ ಭವಿಷ್ಯ  ರೂಪಿಸಲು ಒತ್ತು ನೀಡಲು ಮುಂದಾಗುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಉಜ್ವಲ್‌ಕುಮಾರ ಘೋಷ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಾಲೆಯಿಂದ ಹೊರಗುಳಿಯಲು ಕಾರಣ ಪತ್ತೆ ಹಚ್ಚಿ ಸಂಬಂಧಿಸಿದ ಪಾಲಕರಿಗೆ ಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಸಾಮಾಜಿಕ ಕಾಳಜಿ ಹೊಂದಿ ಕಾರ್ಯ ನಿರ್ವಹಿಸುವಂತೆ    ಅವರು ಹೇಳಿದರು. 

    ಜಿಲ್ಲೆಯ ವಿವಿಧ ತಾಲೂಕಿನ ಬಿಇಒ ಅವರಿಂದ ಮಕ್ಕಳ ಆಧಾರ ಸೀಡಿಂಗ್ ಮಾಹಿತಿ ಪಡೆದುಕೊಂಡ ಅವರು, ಮಕ್ಕಳ ಆಧಾರ ದಾಖಲಾತಿಯಲ್ಲಿ  ಪ್ರಗತಿ ಹೊಂದಬೇಕು. ಅತ್ಯಂತ ಪ್ರಮುಖ ದಾಖಲೀಕರಣ ಕಾರ್ಯದಲ್ಲಿ ಯಾವುದೇ ನಿಲ್ಯಕ್ಷ್ಯ ವಹಿಸದೇ ಪ್ರಗತಿ ತೋರಬೇಕು. ಮಕ್ಕಳ ದಾಖಲಾತಿಯೊಂದಿಗೆ ಆಧಾರ ಸೀಡಿಂಗ್ ಪ್ರಗತಿಯನ್ನು ಹೆಚ್ಚಿಸಬೇಕು. ಶಾಲೆಯಲ್ಲಿ ಆಗಾಗ ನಡೆಯುವ ಶಿಕ್ಷಕ ಪಾಲಕರ ಸಭೆಯಲ್ಲಿ ಈ ಬಗ್ಗೆ ಪಾಲಕರಿಗೆ ಮಕ್ಕಳ ಭವ್ಯ ಭವಿತವ್ಯದ ದೃಷ್ಟಿಯಿಂದ ದಾಖಲೀಕರಣದ ಮಹತ್ವದ ಕುರಿತು ತಿಳಿಸಿಕೊಡುವ ಮೂಲಕ ಜಿಲ್ಲೆಯಲ್ಲಿ ಶೇಕಡಾ ಪ್ರತಿಶತ ಪ್ರಗತಿಗೆ ಶ್ರಮಿಸಿಬೇಕು. ಆಧಾರ ಮಾಹಿತಿ ಪಡೆದುಕೊಂಡು  ಮಿಸ್‌ಮ್ಯಾಚ್ ತಾಂತ್ರಿಕ ಸಮಸ್ಯೆ ನಿವಾರಿಸಿಕೊಂಡು  ಪರಿಹರಿಸಿಕೊಂಡು ದಾಖಲೆಗಳಲ್ಲಿ ವ್ಯತ್ಯಾಸವಾಗದಂತೆ ಕಾರ್ಯ ನಿರ್ವಹಿಸಬೇಕು ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ದಾಖಲೀಕರಣಗೊಳಿಸುವಂತೆ ಅವರು ಸೂಚನೆ ನೀಡಿದರು.   

ವಿವಿಧ ಇಲಾಖೆಯಲ್ಲಿ ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಾಲಮಿತಿಯೊಳಗೆ ಇತ್ಯರ್ಥಪಡಿಸಿ ಬಾಕಿ ಉಳಿಯದಂತೆ ಕ್ರಮವಹಿಸಬೇಕು.  ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣೆ ಹಾಗೂ ಖಾತಾಗಳಿಗೆ ತಾಲೂಕಿನ ಎಒ ಹಾಗೂ ತಹಶೀಲ್ದಾರರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ತಾಲೂಕಾಡಳಿತ ಕಟ್ಟಡಕ್ಕೆ ಅವಶ್ಯ ಇರುವ ಜಾಗ ಗುರುತಿಸಿ ಜಾಗ ಲಭ್ಯತೆ ಮಾಹಿತಿ ವಿವರ ನೀಡಬೇಕು. ಬಿಸಿಊಟ   ಸಮರ​‍್ಕವಾಗಿ ಒದಗಿಸಬೇಕು. ನಿಯಮಾನುಸಾರ ಮೆನುವಿನಂತೆ ಇರುವಂತೆ ನೋಡಿಕೊಳ್ಳಬೇಕು ಆಹಾರ ಗುಣಮಟ್ಟದ ಬಗ್ಗೆ ಸಂಬಧಿಸಿದವರು ಪರೀಶೀಲನೆ ನಡೆಸಬೇಕು. ಅಂಗನವಾಡಿಗೆ ಹೊಸ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಈಗಾಗಲೇ ಹೊಸದಾಗಿ ಅಂಗನವಾಡಿ ಕಟ್ಟಡ  ಅನುಮೋದನೆಗೊಂಡಿದ್ದು, ಯಾವುದೇ ಸಮಸ್ಯೆ ಇಲ್ಲದಿರುವುದನ್ನು ಪರೀಶೀಲಿಸಿಕೊಳ್ಳಬೇಕು. ಗಂಗಾಕಲ್ಯಾಣ ಯೋಜನೆಯಡಿ ಈಗಾಗಲೇ ಕೊರೆದ ಬೋರವೆಲ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಆದ್ಯತೆಯ ಮೇರೆಗೆ ನೀಡಬೇಕು. ಜಿಲ್ಲೆಯಲ್ಲಿ ಜನನ ಮತ್ತು ಮರಣ ನೋಂದಣಿ ಉತ್ತಮವಾಗಿದೆ. ಜೆಜೆಎಂ ಯೋಜನೆಯ ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವೂ ಸೇರಿದಂತೆ ಸರ್ಕಾರಿ ಆಸ್ಪತೆಗಳಲ್ಲಿ ರೇಬಿಸ್ ಹಾಗೂ ಹಾವು ಕಡಿತ ಲಸಿಕೆಗಳನ್ನು ಸಾಕಷ್ಟು ದಾಸ್ತಾನು ಹೊಂದಬೇಕು. ಡಿಎಚ್‌ಒ ಅವರು ನಿರಂತರ ಮಾನಿಟರಿಂಗ್ ಮಾಡಬೇಕು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.  

  

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು  ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪ್ರಥಮಾದ್ಯತೆ ಮೇಲೆ ಅರ್ಜಿ ಸ್ಥಿತಿಗತಿ ಪರೀಶೀಲಿಸಿ ಸಲ್ಲಿಕೆಯಾದ ಅರ್ಜಿಗಳನ್ನು ಇತ್ಯರ್ಥಪಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿಕೊಡಬೇಕೆಂದು ಅವರು ಹೇಳಿದರು. ಎಲ್ಲಾ ವಸತಿ ನಿಲಯಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆ ಸಮರ​‍್ಕವಾಗಿರುವಂತೆ ನೋಡಿಕೊಳ್ಳಬೇಕು. 

ತಾಲೂಕಿನ ಕಂದಾಯ ಇಲಾಖೆಯ ಇ-ಆಫೀಸ್ ಅಳವಡಿಸಿಕೊಳ್ಳಬೇಕು. ಉದ್ಭವಿಸುವ ತಾಂತ್ರಿಕ ಸಮಸ್ಯೆ ನೀಗಿಸಿಕೊಂಡು ಆದಷ್ಟು ಇ ಆಫೀಸ್ ಮೂಲಕ ಕಾರ್ಯನಿರ್ವಹಿಸುವಂತೆಯೂ, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಇ-ಆಫೀಸ್ ಜನೆವರಿ ಮಾಹೆಯೊಳಗೆ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು. 

ಕೃಷಿ ಮಾರುಕಟ್ಟೆ ಇಲಾಖೆ, ಪಶುಸಂಗೋಪನಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ನಡೆಸಲಾಯಿತು. 

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.