ಜಿಲ್ಲಾ ಯೋಜನಾ ಸಮಿತಿ ಸಭೆ : ಜನರಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು : ಸಚಿವ ಎಚ್‌.ಕೆ.ಪಾಟೀಲ

ಜಿಲ್ಲಾ ಯೋಜನಾ ಸಮಿತಿ ಸಭೆ : ಜನರಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು : ಸಚಿವ ಎಚ್‌.ಕೆ.ಪಾಟೀಲ District Planning Committee Meeting: Development plans should be formulated by the people themselves

ಲೋಕದರ್ಶನ ವರದಿ 

 ಗದಗ 26 :  ಜನರಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು. ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ  ಆಡಳಿತ ರೂಪಿಸಲು ಜಿಲ್ಲಾ ಯೋಜನಾ ಸಮಿತಿ ರಚಿಸಲಾಗಿದೆ.  ಈ ಸಭೆಯು ನಿಜವಾಗಿಯೂ ಐತಿಹಾಸಿಕವಾದದ್ದು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಕೆ.ಪಾಟೀಲ ತಿಳಿಸಿದರು. 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ  ಜಿಲ್ಲಾ ಯೋಜನಾ ಸಮಿತಿ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಪಂಚಾಯತ್ ರಾಜ್ ಕಾನೂನು ಅನುಷ್ಟಾನ ಮಾಡುವಲ್ಲಿ ನಮ್ಮ ಜಿಲ್ಲೆಯು ದಿಟ್ಟತನದ ಹೆಜ್ಜೆ ಇಟ್ಟಿದೆ. ಯೋಜನೆ ಸಮಿತಿ ಮಾಡುವ ಕುರಿತು  ಪ್ರತಿ ಗ್ರಾಮ ಗ್ರಾಮಗಳಿಗೆ ತೆರಳಿ ಸಭೆಗಳನ್ನು ಏರಿ​‍್ಡಸಲಾಗಿದೆ.  ಜನರ ಕಲ್ಯಾಣಕ್ಕಾಗಿ ಯೋಜನಾ ಸಮಿತಿ ಬಹು ದೊಡ್ಡ ಕೆಲಸ ಮಾಡಲಿದೆ. 

ಈ ಯೋಜನೆಯ ಅನುಷ್ಟಾನದಲ್ಲಿ ವಿಶೇಷ ಆಸಕ್ತಿ ತೋರಿಸಬೇಕು. ಇದು ಪ್ರಾರಂಭದ ಹಂತವಾಗಿದ್ದು ಮುಂದಿನ ದಿನಗಳಲ್ಲಿ  ಜಿಲ್ಲೆಯ ಯೋಜನೆಗಳು ರಾಜ್ಯಕ್ಕೆ ಮಾದರಿಯಾಗಬೇಕು. ಜನರ ಆಲೋಚನೆಗಳಿಗೆ ಸ್ಪೂರ್ತಿ ತುಂಬುವುದು ಬಹು ಮುಖ್ಯವಾಗಿದೆ.  ಮುಂದಿನ ಆಯವ್ಯಯ ತಯಾರಿಕೆಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ಅವರು ಅಭಿಪ್ರಾಯಪಟ್ಟರು.   

ಜಿಲ್ಲೆಯಲ್ಲಿ  ಐತಿಹಾಸಿಕ ಸ್ಥಳ ಲಕ್ಕುಂಡಿ ಗ್ರಾಮದ ಪ್ರದೇಶಾಬಿವೃದ್ಧಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಹಾಗೂ ವಿವಿಧ ನೂತನ ಸೌಲಭ್ಯಗಳಿಂದ ಕೂಡಿದ  ಕೆ.ಎಚ್‌.ಪಾಟೀಲ ಜಿಲ್ಲಾ ಆಸ್ಪತ್ರೆ  ಹೀಗೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು   ಗ್ರಾಮ ಪಂಚಾಯತ್ ನಿಂದ ತಾಲೂಕು ಪಂಚಾಯತ್, ತಾಲೂಕು ಪಂಚಾಯತ್ ದಿಂದ ಜಿಲ್ಲಾ ಪಂಚಾಯತ್‌ದಿಂದ  ಅಭಿವೃದ್ಧಿ ಯೋಜನೆಗಳ ಸಂಗ್ರಹಣೆ ಮಾಡಿ ಅವುಗಳ ಅನುಷ್ಟಾನವಾಗಬೇಕು. ಅಂದಾಗ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.    

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್‌.ಪಾಟೀಲ ಅವರು ಮಾತನಾಡಿ ಸಂವಿಧಾನದ ಸದಾಶಯಗಳೊಂದಿಗೆ ಜನರ ಭಾವನೆಗಳನ್ನು ಅರಿತುಕೊಂಡು ಜಿಲ್ಲಾ ಯೋಜನಾ ಸಮಿತಿ ಕಾರ್ಯನಿರ್ವಹಿಸಬೇಕು. 2027-28 ರ ಯೋಜನೆಗಳು ಜನರಿಂದ ರೂಪುಗೊಳ್ಳುವಂತಾಗಬೇಕು.  ಈ ನಿಟ್ಟಿನಲ್ಲಿ ಯೋಜನೆಗಳ ಅನುಷ್ಟಾನದಲ್ಲಿ ಗದಗ ಜಿಲ್ಲೆಯು ದೇಶದಲ್ಲಿಯೇ ಮಾದರಿಯಾಗಬೇಕು. ಅಂದಾಗ ಮಾತ್ರ  ಗ್ರಾಮ ರಾಜ್ಯ ರಾಮರಾಜ್ಯವಾಗಲಿದೆ ಎಂದರು.  

ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ,  ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಗಣ್ಯರಾದ ಎಲ್‌.ಡಿ.ಚಂದಾವರಿ, ಕೃಷ್ಣ ಪರಾಪೂರ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್, ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್,  ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್‌.ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ  ಸೇರಿದಂತೆ  ವಿವಿಧ ಇಲಾಖೆಯ ಅಧಿಕಾರಿಗಳು , ಸಮಿತಿಯ ಸದಸ್ಯರುಗಳು ಹಾಜರಿದ್ದರು.