ಜ್ವರ ಪ್ರಕರಣ ಹೆಚ್ಚಳ ಹಿನ್ನೆಲೆ ಬಸರಕೋಡು ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳ ಭೇಟಿ
District Health Officer visits Basarakodu village following a rise in fever cases
ಬಳ್ಳಾರಿ 27 : ತಾಲೂಕಿನ ಯರಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಸರಕೋಡು ಗ್ರಾಮದಲ್ಲಿ ಇತ್ತೀಚೆಗೆ ಜ್ವರದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಡಿ. ಮಳಗಿ ಅವರು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರೀಶೀಲಿಸಿದರು.
ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ವ್ಯವಸ್ಥೆ ಹಾಗೂ ಸಾರ್ವಜನಿಕರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿದ ಅವರು, ಗ್ರಾಮಸ್ಥರೊಂದಿಗೆ ಆರೋಗ್ಯ ಜಾಗೃತಿ ಕುರಿತು ಸಂವಾದ ನಡೆಸಿದರು.
ಬಳಿಕ ಮಾತನಾಡಿದ ಡಾ. ಅಲಕಾನಂದ, "ಮಳೆಗಾಲದಲ್ಲಿ ವೈರಲ್ ಜ್ವರ ಹಾಗೂ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸಾರ್ವಜನಿಕರು ಆತಂಕಪಡಬೇಕಿಲ್ಲ. ಸೂಕ್ತ ಚಿಕಿತ್ಸೆ ಪಡೆದರೆ ಜ್ವರ ಸಂಪೂರ್ಣ ಗುಣಮುಖವಾಗುತ್ತದೆ," ಎಂದು ಹೇಳಿದರು.
"ಮೂರು ದಿನಗಳಿಗಿಂತ ಹೆಚ್ಚು ಕಾಲ ಜ್ವರ, ತೀವ್ರ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು ಅಥವಾ ಕೀಲು ನೋವು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು," ಎಂದು ಸಲಹೆ ನೀಡಿದರು. ಬಸರಕೋಡು ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ಗ್ರಾಮಸ್ಥರು ಅದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಕೈಗೊಂಡ ಮುಂಜಾಗ್ರತಾ ಕ್ರಮಗಳು
ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸುತ್ತಿದ್ದು, ಅಗತ್ಯವಿರುವವರ ರಕ್ತದ ಮಾದರಿ ಸಂಗ್ರಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ನೀರು ಸಂಗ್ರಹವಾಗಿರುವ ಪಾತ್ರೆಗಳು, ಹೂವಿನ ಕುಂಡಗಳು, ಹಳೆಯ ಟೈರ್ಗಳು, ತೆಂಗಿನ ಚಿಪ್ಪು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳಲ್ಲಿ ಸೊಳ್ಳೆ ಲಾರ್ವಾ ಉತ್ಪತ್ತಿಯಾಗದಂತೆ ಪರೀಶೀಲನೆ ನಡೆಸಿ, ಲಾರ್ವಾ ಕಂಡುಬಂದ ಸ್ಥಳಗಳಲ್ಲಿ ತಕ್ಷಣ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ.
ಸೊಳ್ಳೆಗಳ ನಿಯಂತ್ರಣಕ್ಕಾಗಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ದೇಹವನ್ನು ಸಂಪೂರ್ಣ ಮುಚ್ಚುವ ಉಡುಪು ಧರಿಸುವುದು, ಕಿಟಕಿಗಳಿಗೆ ಜಾಲರಿ ಅಳವಡಿಸುವುದು, ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿವಾರಕಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಯಿತು.
ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ತಕ್ಷಣ ಫಾಗಿಂಗ್ ನಡೆಸುವುದು ಹಾಗೂ ಚರಂಡಿಗಳ ಸ್ವಚ್ಛತೆ ಕಾಪಾಡುವಂತೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಾಂಬಿ ವಿ.ಕೆ., ವೈದ್ಯಾಧಿಕಾರಿ ಡಾ. ಪ್ರಹ್ಲಾದ್, ಗ್ರಾಮದ ಮುಖಂಡ ತಿಪ್ಪಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ಹಿರಿಯ ಆರೋಗ್ಯ ನೀರೀಕ್ಷಕ ಪಂಪಾಪತಿ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 