ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಶನ್ ಉದ್ಘಾಟನೆ
ಬೆಳಗಾವಿ, .06 : ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಗುರುತಿಸಲಾಗುವ ಮಾಧ್ಯಮರಂಗವು ಆಡಳಿತ ವ್ಯವಸ್ಥೆ ಸುಧಾರಣೆಗೆ ಅನುಕೂಲ ಕಲ್ಪಿಸುವುದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದ ಎಸ್.ಜಿ.ಬಿ.ಐ.ಟಿ ಕಾಲೇಜಿನ ಸಭಾಂಗಣದಲ್ಲಿ ರವಿವಾರ (ಎ.06) ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಅವರು ಮಾತನಾಡಿದರು. ಭಾಷಾ ಸೂಕ್ಷ್ಮತೆ ಇರುವುದರಿಂದ ಜಿಲ್ಲೆಯಲ್ಲಿ ನಡೆಯುವ ವರದಿಗಳು ದೆಹಲಿಯಲ್ಲಿ ಕೂಡ ಸದ್ದು ಮಾಡುತ್ತವೆ. ಆದ್ದರಿಂದ ಕೆಲವೊಮ್ಮೆ ವೈಯಕ್ತಿಕ ಘರ್ಷಣೆಗಳು ಕೂಡ ಜಾತಿ-ಧರ್ಮ, ಭಾಷಾ ವೈಷಮ್ಯದ ಸ್ವರೂಪ ಪಡೆದುಕೊಂಡು ಜಿಲ್ಲೆಗೆ ಕೆಟ್ಟ ಹೆಸರು ತರುತ್ತವೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಆದ್ದರಿಂದ ಜಾತಿ-ಧರ್ಮ, ಭಾಷೆಯ ವಿಚಾರಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ವರದಿ ಮಾಡುವಾಗ ಮಾಧ್ಯಮ ಪ್ರತಿನಿಧಿಗಳು ಸಮಗ್ರ ಸಂಗತಿಯನ್ನು ಪರಾಮರ್ಶೆ ಮಾಡಿಕೊಂಡು ನೈಜ ಸಂಗತಿಯನ್ನು ವರದಿ ಮಾಡಬೇಕು ಎಂದು ಕಿವಿಮಾತು ಹೇಳಿದರು.ಪತ್ರಕರ್ತರಿಗೆ ನಿವೇಶನ ಹಾಗೂ ಆರೋಗ್ಯ ವಿಮೆ ಸೇರಿದಂತೆ ಪತ್ರಕರ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಪತ್ರಕರ್ತರಿಗೆ ನಿವೇಶನ ಮಂಜೂರಾತಿಗೆ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಭರವಸೆ ನೀಡಿದರು.ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, "ಸತ್ಯದ ಬೆಳಕು ಹರಡುವ ಶಕ್ತಿಯೇ ಮಾಧ್ಯಮ"ವಾಗಿದೆ. ಪಾರದರ್ಶಕ ವರದಿ ಮೂಲಕ ಪ್ರಜೆ ಹಾಗೂ ಸರ್ಕಾರದ ಮಧ್ಯ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಪ್ರಜೆಗಳಿಗೆ ಶಕ್ತಿ ತುಂಬುವ ಜತೆಗೆ ಸತ್ಯದ ಕಾವಲುಗಾರನಾಗಿ ಮಾಧ್ಯಮ ಕೆಲಸ ಮಾಡಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಮಾತನಾಡಿ "ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು" ಎಂಬ ಮಾತಿನಂತೆ ಪ್ರತಿಯೊಂದು ವರದಿ ಮಾಡುವಾಗ ಪಾರದರ್ಶಕತೆ ಮತ್ತು ನೈಜತೆ ಇರಬೇಕು. ಎಂದು ಸಲಹೆ ನೀಡಿದರು. ಹಿರಿಯ ಪತ್ರಕರ್ತ ಮೆಹಬೂಬ್ ಮಕಾಂದಾರ್ ಮಾತನಾಡಿ, ಜನರ ಧ್ವನಿಯಾಗಿ ಹಗಲಿರುಳು ದುಡಿಯುವ ಪತ್ರಕರ್ತರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆಯು ಉತ್ತಮ ವೇದಿಕೆಯಾಗಿದೆ. ಪತ್ರಕರ್ತರಿಗೆ ಸರಕಾರದ ಸಹಾಯ-ಸೌಲಭ್ಯ ಒದಗಿಸಲು ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶ್ರೀಕಾಂತ ಕುಬಕಡ್ಡಿ ಅವರು, ಬೆಳಗಾವಿ ಮತ್ತು ಚಿಕ್ಕೋಡಿಯ ಎಲೆಕ್ಟ್ರಾನಿಕ್ ಮಾಧ್ಯಮದ ವರದಿಗಾರರು ಮತ್ತು ಕ್ಯಾಮೆರಾಮೆನ್ ಗಳ ಹಿತಾಸಕ್ತಿ ಕಾಪಾಡುವ ಉದ್ಧೇಶದಿಂದ ನೂತನ ಸಂಘವನ್ನು ಸ್ಥಾಪಿಸಲಾಗಿದೆ. ವೃತ್ತಿಪರ ಸವಾಲುಗಳನ್ನು ಸಮರ್ಕವಾಗಿ ನಿಭಾಯಿಸುವುದರೊಂದಿಗೆ ಸೂಕ್ತ ಸಹಾಯ-ಸೌಲಭ್ಯಗಳನ್ನು ಪಡೆದುಕೊಂಡು ಸಾರ್ವಜನಿಕರ ಧ್ವನಿಯಾಗಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ನೂತನ ಸಂಘದ ಅಧ್ಯಕ್ಷ ಮಂಜುನಾಥ ಪಾಟೀಲ ಅವರು, ಜಿಲ್ಲೆಯ ಸೂಕ್ಷ್ಮ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಸಾಮಾಜಿಕ ಬದ್ಧತೆ ಮತ್ತು ವೃತ್ತಿಪರತೆಯ ಸಮ್ಮಿಳನದೊಂದಿಗೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಎಂದು ಕೃತಜ್ಞತೆ ಸಲ್ಲಿಸಿದರು.ಗುರುತಿನ ಚೀಟಿ ವಿತರಣೆ: ಸಂಸದ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಚಿಹ್ನೆ ಅನಾವರಣಗೊಳಿಸಿದರು. ಬಳಿಕ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಂಘದ ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತರಾದ ಶುಭ.ಬಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ಉಪಾಧ್ಯಕ್ಷ ಚಂದ್ರು ಶ್ರೀರಾಮಡು, ಸಹ ಕಾರ್ಯದರ್ಶಿ ಶ್ರೀಧರ ಕೋಟಾರಗಸ್ತಿ, ಖಜಾಂಚಿ ಅನಿಲ್ ಕಾಜಗಾರ, ಚಂದ್ರಕಾಂತ ಸುಗಂಧಿ, ಮೈಲಾರಿ ಪಟಾತ್, ಸಂತೋಷ ಶ್ರೀರಾಮುಡು, ಲೋಹಿತ್ ಶಿರೋಳ, ಅಸೋಷಿಯೇಶನ್ ಪದಾಧಿಕಾರಿಗಳು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ (ಮುದ್ರಣ ಮಾಧ್ಯಮ) ವಿಲಾಸ್ ಜೋಶಿ, ಬೆಳಗಾವಿ ಮರಾಠಿ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಶಾಪೂರಕರ್ ಸೇರಿದಂತೆ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಪ್ರತಿನಿಧಿಗಳು ಮತ್ತು ರೈತಪರ, ಕನ್ನಡಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಸುಗಂಧಿ ಸ್ವಾಗತ ಕೋರಿದರು, ಸುನೀತಾ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.