ಕಲಬುರಗಿಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಹಿಂಪಡೆದು ಜಿಲ್ಲಾಧಿಕಾರಿ ಆದೇಶ

ಕಲಬುರಗಿ,  ಮೇ 8,ಲಾಕ್ ಡೌನ್ 3.0 ಜಿಲ್ಲೆಯಲ್ಲಿ ಸಡಿಲಿಕೆ ನೀಡಿ ಕೆಲವೊಂದು ಅಂಗಡಿ-  ವಾಣಿಜ್ಯ ಮಳಿಗೆಗಳನ್ನು ತೆರೆಯಲು ನೀಡಲಾದ ಅನುಮತಿಯನ್ನು ಜಿಲ್ಲಾಧಿಕಾರಿ ಶರತ್ ಅಬಿ  ಅವರು ವಾಪಸ್ಸು ಪಡೆದು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ  ಹಿತದೃಷ್ಟಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ನೀಡಿ ಬುಧವಾರ  ಕೆಲವೊಂದು ಅಂಗಡಿ-ವಾಣಿಜ್ಯ ಮಳಿಗೆಗಳನ್ನು ತೆರೆಯಲು  ಅನುಮತಿ ನೀಡಲಾಗಿತ್ತು.

ಆದರೆ,  ಸಾರ್ವಜನಿಕರು ಸಾಮಾಜಿಕ ಅಂತರ‌ ಕಾಯ್ದುಕೊಳ್ಳದಿರುವುದು ಕಂಡುಬಂದ ಹಿನ್ನೆಲೆಯಲ್ಲಿ  ಕೊರೊನಾ‌ ನಿಯಂತ್ರಣ ದೃಷ್ಠಿಯಿಂದ  ಜಿಲ್ಲಾಧಿಕಾರಿ ಈ ಸಡಿಲಿಕೆ ಆದೇಶ  ಹಿಂಪಡೆದಿದ್ದಾರೆ. ಹೀಗಾಗಿ ಶುಕ್ರವಾರದಿಂದ ಬಟ್ಟೆ, ಪಾತ್ರೆ, ಬಂಗಾರ, ಮೊಬೈಲ್ ಅಂಗಡಿ ರಿಚಾರ್ಜ್ ಸೆಂಟರ್, ಬೇಕರಿ, ಎಲೆಕ್ಟ್ರಾನಿಕ್ಸ್ ಶಾಪ್ ಮತ್ತು ಹೋಮ್ ಅಪ್ಲಾಯನ್ಸ್, ಬುಕ್ ಸ್ಟಾಲ್, ಸ್ಟೇಷನರಿ ಅಂಗಡಿ, ಹಾರ್ಡವೇರ್, ಪೇಂಟ್ ಅಂಗಡಿ, ಅಟೋಮೋಬೈಲ್ ಅಂಗಡಿ ಹಾಗೂ ಕಂಪ್ಯೂಟರ್ (ಸಾಫ್ಟವೇರ್ ಹಾಗೂ ಹಾರ್ಡ್‍ವೇರ್) ಅಂಗಡಿಗಳನ್ನು ತೆರೆಯುವಂತಿಲ್ಲ.ಇದಲ್ಲದೇ  ಹೊಟೇಲ್‍ಗಳಲ್ಲಿ  ಪಾರ್ಸಲ್ ವ್ಯವಸ್ಥೆಗೂ ಕಡಿವಾಣ ಹಾಕಲಾಗಿದೆ.

ಇನ್ನು ಮೊದಲಿನಂತೆ ಮಾಲ್,  ಮಲ್ಟಿಪ್ಲೆಕ್ಸ್, ಸಿನಿಮಾ ಚಿತ್ರಮಂದಿರ, ಲಾಡ್ಜ್ ಗಳು ತೆರೆಯುವಂತಿಲ್ಲ. ಅಲ್ಲದೇ,  ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚ್‌ ಗಳಲ್ಲಿ ಸಾಮೂಹಿಕ ಪ್ರಾರ್ಥನೆ  ನಿಷೇಧಿಸಲಾಗಿದೆ. ಹೇರ್ ಕಟಿಂಗ್ ಸಲೂನ್ ಅಂಗಡಿಗಳು, ಮಸಾಜ್ ಸೆಂಟರ್ಸ್, ಈಜುಕೊಳಗಳು,  ಜಿಮ್‍, ಕಿರಾಣಾ ಅಂಗಡಿ, ಪಾನ್ ಅಂಗಡಿಗಳಲ್ಲಿ ಬೀಡಿ, ಸಿಗರೇಟ್, ಗುಟಕಾ, ಪಾನ್ ಬೀಡಾಗಳ ಮಾರಾಟ ಮಾಡುವಂತಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.