ಬೆಂಗಳೂರು, ಏಪ್ರಿಲ್ 9, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ, ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮದ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ವೈರಸ್ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಹೋಂ ಕ್ವಾರಂಟೀನ್ ನಲ್ಲಿರಿಸಿ, ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರು ಗುಂಪು ಕಟ್ಟಿಕೊಂಡು ಓಡಾಡುತ್ತಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡುಬಂದಿರುತ್ತದೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೈಲನರಸಾಪುರ ಗ್ರಾಮದ ಎಲ್ಲಾ ಕುಟುಂಬಗಳನ್ನು ಹೋಂ ಕ್ವಾರಂಟೀನ್ ನಲ್ಲಿಟ್ಟು, ಮನೆ ಮತ್ತು ಗ್ರಾಮದಿಂದ ಹೊರಗೆ ಬಾರದಂತೆ ಹಾಗೂ ಗ್ರಾಮಕ್ಕೆ ಯಾರು ಪ್ರವೇಶಿಸದಂತೆ ಆದೇಶಿಸಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಒಂದು ರಿಸರ್ವ್ ಪೊಲೀಸ್ ಪಡೆಯ ವಾಹನವು ಗ್ರಾಮದಲ್ಲಿ ಗಸ್ತು ತಿರುಗಲಿದೆ. ಲಾಕ್ ಡೌನ್ ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮಕೈಗೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನಿರ್ದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.