ಕಾರವಾರ 18 : ಏಪ್ರಿಲ್ 23ರಂದು ಮತದಾನ ನಡೆಯಲಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶ್ಕುಮಾರ್ ಕೆ. ಪರಿಶೀಲಿಸಿದರು.
ಗುರುವಾರ ಹಳಿಯಾಳ, ಯಲ್ಲಾಪುರ ಹಾಗೂ ಶಿರಸಿ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ ಅವರು, ಭದ್ರತಾ ಕೊಠಡಿಗಳು, ಮತಗಟ್ಟೆ ಅಧಿಕಾರಿಗಳಿಗೆ ಕೈಗೊಂಡ ತರಬೇತಿ ಪ್ರಕ್ರಿಯೆ ಹಾಗೂ ಪ್ರತಿ ಮತಗಟ್ಟೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಿರುವ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮಾದರಿ ನೀತಿ ಸಂಹಿತೆ ಸಹಾಯಕ ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಏಪ್ರಿಲ್ 21ರಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಆಗದಂತೆ ಸಮಚಿತ್ತದಿಂದ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ನಿಯೋಜಿತ ಸಿಬ್ಬಂದಿಗೆ ವಹಿಸಿರುವ ಜವಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವ ಸಂಬಂಧ ಸೂಚನೆಗಳನ್ನು ನೀಡುವುದು ಹಾಗೂ ಸಂಬಂಧಿ ಮಾಹಿತಿಯನ್ನು ತಕ್ಷಣ ವರದಿ ಮಾಡುವುದು ಸಹಾಯಕ ಚುನಾವಣಾಧಿಕಾರಿಗಳ ಜವಾಬ್ದಾರಿ ಎಂದು ಅವರು ಹೇಳಿದರು.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ವಿಶೇಷವಾಗಿ ರೂಪಿಸಿರುವ ವಿಕಲ ಚೇತನ ಮತದಾರರ ಸೌಲಭ್ಯ ಕಲ್ಪಿಸುವ ಸಂಬಂಧ ವಿಶೇಷ ಗಮನ ಹರಿಸಬೇಕು ಹಾಗೂ ಈ ಸಂಬಂಧ ನಿಯೋಜನೆಗೊಂಡಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಬಹು ವಿಧದ ಪುನರ್ವಸತಿ ಕಾರ್ಯಕರ್ತರು ನೆರವು ತಂತ್ರಾಂಶ ನಿರ್ವಹಿಸುವ ಬಗ್ಗೆ ಗಮನ ಹರಿಸಬೇಕು ಎಂದರು.
ಭದ್ರತಾ ಲೋಪಗಳಾಗದಂತೆ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಗತ್ಯವಿರುವ ಸೌಲಭ್ಯಗಳನ್ನು ಹಾಗೂ ಭದ್ರತಾ ಸಿಬ್ಬಂದಿಯನ್ನು ಆಯಕಟ್ಟಿನಲ್ಲಿ ನಿಯೋಜಿಸಬೇಕು ಎಂದು ಅವರು ಸೂಚಿಸಿದರು.
ಪ್ರೊಬೇಷನರ್ ಐಎಎಸ್ ಅಧಿಕಾರಿ ದಿಲೀಶ್ ಸಸಿ ಉಪಸ್ಥಿತರಿದ್ದರು.