ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ  Distribution of free uniforms to underprivileged students

ಲೋಕದರ್ಶನ ವರದಿ 

ಕಂಪ್ಲಿ 20: ತಾಲ್ಲೂಕಿನ ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸುಗ್ಗೇನಹಳ್ಳಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಸುಗ್ಗೇನಹಳ್ಳಿಯ ಜೋಗತಿ ರಾಜಮ್ಮ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಎ. ಜಡಪ್ಪ, ಶಾಲೆಯಲ್ಲಿ ಪ್ರಸ್ತುತ 27 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಬಡತನದಲ್ಲಿ ಜೀವನ ನಡೆಸುತ್ತಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಜೋಗತಿ ರಾಜಮ್ಮ ಅವರು ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಿರುವುದು ಶ್ಲಾಘನೀಯ ಎಂದರು. ಸಮವಸ್ತ್ರದ ಸದುಪಯೋಗ ಪಡೆದುಕೊಂಡು ಮಕ್ಕಳು ಉತ್ತಮ ಶಿಕ್ಷಣವಂತರಾಗಬೇಕು ಎಂದು ಹೇಳಿದರು.  

ಜೋಗತಿ ರಾಜಮ್ಮ ಮಾತನಾಡಿ, ಪ್ರತಿ ವರ್ಷ ತಾವು ದುಡಿದ ಹಣದಲ್ಲಿ ಅಲ್ಪ ಮೊತ್ತವನ್ನಾದರೂ ದಾನ ಧರ್ಮಕ್ಕೆ ವಿನಿಯೋಗಿಸಬೇಕು ಎಂಬ ಉದ್ದೇಶದಿಂದ ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಿರುವುದಾಗಿ ತಿಳಿಸಿದರು. ಶಾಲೆಯ ಮಕ್ಕಳನ್ನೇ ತಮ್ಮ ಮಕ್ಕಳಂತೆ ಭಾವಿಸಿ ಪ್ರತಿವರ್ಷ ಸಮವಸ್ತ್ರ ವಿತರಿಸುತ್ತಿರುವುದಾಗಿ ಹೇಳಿದರು.  

ಮಕ್ಕಳಿಲ್ಲದ ರಾಜಮ್ಮ ಅವರು ಶಾಲಾ ವಿದ್ಯಾರ್ಥಿಗಳನ್ನೇ ತಮ್ಮ ಮಕ್ಕಳಂತೆ ಭಾವಿಸಿ ಪ್ರತಿವರ್ಷ ಸಮವಸ್ತ್ರ ವಿತರಿಸುತ್ತಿರುವುದು ವಿಶೇಷವಾಗಿದೆ.  ಸಮವಸ್ತ್ರ ವಿತರಿಸಿದ ಜೋಗತಿ ರಾಜಮ್ಮ ಅವರನ್ನು ಚಿನ್ನಾಪುರ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.  

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎಂ. ರಮೇಶಬಾಬು, ಮುಖಂಡರಾದ ಕೆ. ಗಣೇಶ, ಮಲ್ಲಿಕಾರ್ಜುನ, ಕೊಂಡಪ್ಪ, ಪಿ. ತಾರಾಸಾಬ್, ಜಯರಾಮುಲು, ಪಿ. ರಾಜು, ಹೊನ್ನೂರು, ಅತಿಥಿ ಶಿಕ್ಷಕ ಉಮೇಶ ಹಾಗೂ ಅಡುಗೆ ಸಿಬ್ಬಂದಿ ರತ್ನಮ್ಮ, ಬುಡ್ಡಮ್ಮ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.