ಗ್ರಾಮೀಣ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು: ಆನಂದ ಚತುರ್ವೇದಿ

ಗ್ರಾಮೀಣ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು: ಆನಂದ ಚತುರ್ವೇದಿ   Distribution of cheques and tabs to talented students

ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಚೆಕ್, ಟ್ಯಾಬ್ ವಿತರಣೆ    

ಧಾರವಾಡ, 22 ;  ‘ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಆರ್ಥಿಕ ಸಹಾಯದ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು’ ಎಂದು ಬೆಂಗಳೂರಿನ ಅವಸರ ಫೌಂಡೇಶನ್ ಅಧ್ಯಕ್ಷ ಆನಂದ ಚತುರ್ವೇದಿ ಸಲಹೆ ನೀಡಿದರು. 

ಕರ್ನಾಟಕ ವಿವಿ ಉನ್ನತ ಭಾರತ ಅಭಿಯಾನ ಕೋಶದ ಆಶ್ರಯದಲ್ಲಿ ವೇಮನ ಪೀಠದಲ್ಲಿ ನಡೆದ  ಬೆಂಗಳೂರಿನ ಅವಸರ ಫೌಂಡೇಶನ್  ಟ್ರಸ್ಟ್‌  ಕವಿವಿ ದತ್ತು ಪಡೆದಿರುವ ಕಲಘಟಗಿ ತಾಲೂಕಿನ ಕುರವಿನಕೊಪ್ಪ, ಧುಮ್ಮವಾಡ, ಗಂಬ್ಯಾಪುರ, ದೇವಲಿಂಗನಕೊಪ್ಪ 4 ಗ್ರಾಮಗಳ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ಪ್ರತಿಭಾನ್ವಿತ 34 ವಿದ್ಯಾರ್ಥಿನಿಯರಿಗೆ(3.60 ಲಕ್ಷ ರೂ ಚೆಕ್)    ಶಿಷ್ಯವೇತನ ಹಾಗೂ  15 ವಿದ್ಯಾರ್ಥಿನಿಯರಿಗೆ (2.62 ಲಕ್ಷ ಮೌಲ್ಯದ) ಟ್ಯಾಬ್‌ಗಳ ವಿತರಣೆ ಮಾಡಿ ಅವರು ಮಾತನಾಡಿದರು.  

ಅವಸರ ಫೌಂಡೇಶನ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದ್ದು, ಕಠಿಣ ಪರಿಶ್ರಮದ ಮೂಲಕ ಸರಿಯಾಗಿ ಓದಿ ಸಾಧನೆ ಮಾಡುವಂತೆ ಅವರು ಕರೆ ನೀಡಿದರು. ಫೌಂಡೇಶನ್ ಸಹಯೋಗದಲ್ಲಿ ಕೆ.ಸಿ.ಡಿಯಲ್ಲಿ ಕಾಮರ್ಸ ಪದವಿ ಅಧ್ಯಯನದಲ್ಲಿ  ಲಾಜಿಸ್ಟಿಕ್ ತರಬೇತಿ ಕೂಡ ಪ್ರಾರಂಭಿಸಲಾಗಿದೆ ಎಂದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಎ.ಎಂ.ಖಾನ್ ಅವರು ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಆರ್ಥಿಕ ತೊಂದರೆಯಲ್ಲಿರುವವರಿಗೆ ಅವಸರ ಫೌಂಡೇಶನ್ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿನಿಯರು ನಕಾರಾತ್ಮಕವಾಗಿ ಚಿಂತನೆ ಕೈಬಿಟ್ಟು, ಸಕಾರಾತ್ಮಕವಾಗಿ ಓದಿ ಗುರಿ ಸಾಧಿಸಿ ತಂದೆ ತಾಯಿಗೆ ಹೆಸರು ತರುವ ಕೆಲಸ ಮಾಡಬೇಕು. ಟ್ಯಾಬ್ ಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು  ಸಲಹೆ ನೀಡಿದ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಆರ್ಥಿಕ ತೊಂದರೆಯಿಂದ ವೈದ್ಯನಾಗಬೇಕಾಗಿದ್ದ ಆಶೆ ಇಡೇರಲಿಲ್ಲ ಆದರೆ ಈಗ ಕುಲಪತಿಯಾಗಿರುವೆ’ ಎಂದು ಬಾಲ್ಯದ ದಿನಗಳನ್ನು ಹಂಚಿಕೊಂಡರು. 

ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಮಾಳವಿಕಾ ಚತುರ್ವೇದಿ ಕರ್ನಾಟಕ ವಿವಿಯ ಹಳೆಯ ವಿದ್ಯಾರ್ಥಿನಿಯಾಗಿ ಕಲಿತ ವಿವಿಗೆ ಅಳಿಲು ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದು, ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂಬುದು ನನ್ನ ಆಶೆಯಾಗಿದೆ ಎಂದರು.ಕವಿವಿ. ಮಹಾಯೋಗಿ ವೇಮನ ಪೀಠದ ಸಂಯೋಜಕ ಡಾ.ಎಚ್‌.ಬಿ.ನೀಲಗುಂದ ಮಾತನಾಡಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಸಂಗೀತಾ ಮಾನೆ, ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಜೆ.ಎಂ.ಚಂದುನವರ, ಅವಸರ ಫೌಂಡೇಶನ ಕಾರ್ಯಕ್ರಮ ವ್ಯವಸ್ಥಾಪಕಿ ಸತ್ಯವತಿ ಕಾರ್ಯಕ್ರಮ  ಉಪಸ್ಥಿತರಿದ್ದರು. ಉನ್ನತ ಭಾರತ ಅಭಿಯಾನ ಕೋಶದ ಸಂಯೋಜಕ ಡಾ.ಚೇತನ ಜೆ.ಡಿ ಸ್ವಾಗತಿಸಿ ವಂದಿಸಿದರು. ದತ್ತುಗ್ರಾಮಗಳ ವಿದ್ಯಾರ್ಥಿನಿಯರ ಪಾಲಕರು ಪಾಲ್ಗೊಂಡಿದ್ದರು.