ಹಿರಿಯ ನಾಗರಿಕರಿಗೆ ಸಹಾಯಕ ಸಾಧನಗಳ ವಿತರಣೆ

ಹಿರಿಯ ನಾಗರಿಕರಿಗೆ ಸಹಾಯಕ ಸಾಧನಗಳ ವಿತರಣೆ Distribution of assistive devices to senior citizens

ಲೋಕದರ್ಶನ ವರದಿ 

ಬೆಳಗಾವಿ 01 : ಕಾಹೆರ ಕುಲಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ಜನ್ಮದಿನಾಚರಣೆಯ ಅಂಗವಾಗಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದ ‘ಅಲಿಮ್ಕೋ’ (ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ), ಕಾಹೆರ ಹಾಗೂ ಕೆಎಲ್‌ಇ ಚಾರಿಟೇಬಲ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಸಹಾಯಕ ಸಾಧನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಗಾಲಿಯುಕ್ತ ಖುರ್ಚಿಗಳು, ಶ್ರವಣ ಸಾಧನಗಳು ಹಾಗೂ ದೈನಂದಿನ ಜೀವನಕ್ಕೆ ಅಗತ್ಯವಿರುವ ವಿವಿಧ ಉಪಕರಣಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆ.ಎನ್‌. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ ಅವರು, ಅಂಗವಿಕಲತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಅಗತ್ಯವಾದ ನೆರವು ಮತ್ತು ಕಾಳಜಿ ಒದಗಿಸುವ ಕಾರ್ಯಕ್ಕೆ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಹೇಳಿದರು.

ಅಗತ್ಯವಿರುವವರು ಅಥವಾ ಅಂಗವಿಕಲತೆಯಿಂದ ಬಳಲುತ್ತಿರುವವರು ತಮ್ಮ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕಾಹೆರದ ಹೊಸ ಯೋಜನೆಗಳ ನಿರ್ದೇಶಕರಾದ ಡಾ. ವಿ.ಡಿ. ಪಾಟೀಲ, ಕೆಎಲ್‌ಇ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಆರೀಫ್ ಮಾಲ್ದಾರ, ಡಾ. ಆರ್‌.ಎಸ್‌. ಮುಧೋಳ, ಡಾ. ಅಂಜಲಿ ಮೆಟಗುಡಮಠ, ಅಲಿಮ್ಕೋ ಮೇಲ್ವಿಚಾರಕರಾದ ಸನಾತನ, ಡಾ. ರವಿ ಜತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.