ಸೋಗಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಪ್ರದರ್ಶನ

ಸೋಗಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಪ್ರದರ್ಶನ  Outstanding performance by students of Sogi Government PU College


ಹೂವಿನಹಡಗಲಿ, ಆ.31: ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸೋಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.  ಗುಂಪು ಆಟಗಳ ವಿಭಾಗದಲ್ಲಿ ಕಾಲೇಜಿನ ಬಾಲಕರ ಬಾಲ್ ಬ್ಯಾಡ್ಮಿಂಟನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಬಾಲಕಿಯರ ಖೋ-ಖೋ ತಂಡವೂ ಚಾಂಪಿಯನ್ ಪಟ್ಟ ಗಳಿಸಿದೆ. ಈ ಎರಡೂ ತಂಡಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿವೆ.  

ವೈಯಕ್ತಿಕ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗೆದ್ದಿದ್ದಾರೆ. ಭಾರತಿ 3000 ಮೀಟರ್ ಓಟದಲ್ಲಿ ಪ್ರಥಮ, 800 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ಮತ್ತೊಂದು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ತೇಜಸ್ವಿನಿ 400 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ರಂಜಿತಾ ತೃತೀಯ ಸ್ಥಾನ ಗಳಿಸಿದ್ದಾರೆ. ನಂದಿನಿ 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.  

ಸ್ಪಂದನ, ರಂಜಿತಾ, ನಂದಿನಿ ಹಾಗೂ ಮಮತಾ ಅವರ ತಂಡ 400 ಮೀಟರ್ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದೆ. ಹಾಲಮ್ಮ ಮತ್ತು ಗಂಗಾಧರ 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿದರೆ, ದಿವ್ಯಾ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.  

ಬಾಲಕರ ವಿಭಾಗದಲ್ಲಿ ಎಸ್‌. ಆಕಾಶ್ ಚಕ್ರ ಎಸೆತದಲ್ಲಿ ಪ್ರಥಮ ಹಾಗೂ ಜಾವೆಲಿನ್ ಎಸೆತ ಮತ್ತು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪ್ರಜ್ವಲ್ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಉದ್ದ ಜಿಗಿತದಲ್ಲಿ ಗಂಗಾಧರ ದ್ವಿತೀಯ ಹಾಗೂ ಪ್ರಜ್ವಲ್ ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರದೀಪ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.  

ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಕಾಲೇಜಿನ ಪ್ರಾಚಾರ್ಯೆ ಜ್ಯೋತಿ ಎಸ್‌., ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್ ನಾರಾಯಣ, ಉಪನ್ಯಾಸಕರಾದ ವೆಂಕಟೇಶ್, ಶಬೀನಾ, ಪರಶುರಾಮ ನಾಗೋಜಿ, ನರೇಶ್ ನಟರಾಜ್ ಹಾಗೂ ನೇತ್ರಾವತಿ ಅಭಿನಂದನೆ ಸಲ್ಲಿಸಿದ್ದಾರೆ.