ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್‌ ವಿತರಣೆ : ಆಹಾರ ಸಚಿವ ಕೆ.ಹೆಚ್‌. ಮುನಿಯಪ್ಪ.

Distribution of BPL ration cards to the eligible: Food Minister K.H. Muniyappa

ಬೆಳಗಾವಿ ಸುವರ್ಣಸೌಧ ಡಿ.09: ಅನರ್ಹರು ಬಿಪಿಎಲ್ ಕಾರ್ಡಗಳನ್ನು ಬಳಸುತ್ತಾರೆ ಎನ್ನುವ ದೂರನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್‌ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಆಹಾರ ಸಚಿವರಾದ ಕೆ.ಎಚ್‌.ಮುನಿಯಪ್ಪ ಅವರು ಹೇಳಿದರು. 

ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 09 ರಂದು ಪರಿಷತ್ ಸದಸ್ಯರಾದ ಕೆ ಎ ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಹಾಗೂ ವಿರೋದ ಪಕ್ಷದ ಕೆಲ ಸದಸ್ಯರು ಬಿಪಿಎಲ್ ಪಡಿತರ ಕಾರ್ಡ್‌ ರದ್ದು ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. 

ರಾಜ್ಯದಲ್ಲಿ ಸುಮಾರು ಶೇಕಡ 65 ರಿಂದ 75ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುವ ಮಾಹಿತಿ ಇದೆ. ಬಡತನದಲ್ಲಿ ಇರುವ ಜನತೆಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ ಸಚಿವರು ಇನ್ನಷ್ಟು ಸಮಯ ಪಡೆದುಕೊಂಡು ಬಿಪಿಎಲ್ ಪಡಿತರದಾರರಿಗೆ ತೊಂದರೆಯಾಗದ ಹಾಗೆ ಎಪಿಎಲ್ ಕಾರ್ಡ್‌ಗೆ ಅರ್ಹ ಇರುವವರನ್ನು ಬಿಪಿಎಲ್‌ನಿಂದ ಬೇರಿ​‍್ಡಸಲಾಗುವುದು ಎಂದು ತಿಳಿಸಿದರು. 

ಪ್ರಸ್ತುತ ಈಗಿರುವ ಬಿಪಿಎಲ್ ಕಾರ್ಡ್‌ ಗಳಲ್ಲಿ ಶೇಕಡಾ 20 ರಷ್ಟು ಎಪಿಎಲ್ ಕಾರ್ಡದಾರರು ಸೇರಿದ್ದಾರೆ ಎಂದು ಅಂದಾಜಿಸಲಾಗಿದ್ದು ಇದನ್ನು ಅತಿ ಶೀಘ್ರದಲ್ಲಿ ಪರಿಷ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದರು. 

ಅರ್ಹ ಬಿಪಿಎಲ್ ಕಾರ್ಡಗಳು ಯಾವುದೇ ರೀತಿಯಲ್ಲಿ ರದ್ದಾಗದಂತೆ ಎಚ್ಚರಿಕೆ ವಹಿಸಲಾಗುವುದು. ಅರ್ಹರ ಬಿಪಿಎಲ್ ಕಾರ್ಡಗಳು ರದ್ದಾಗಿದ್ದರೆ ಅಂತವರಿಗೆ ಪುನಃ ಕಾರ್ಡು ದೊರಕಿಸಿಕೊಡಲಾಗುವುದು ಎಂದರು. 

ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಿದಲ್ಲಿ ಕಾರ್ಡಗಳ ಪರಿಷ್ಕರಣೆ ಕಾರ್ಯವು ಸಫಲವಾಗಲಿದೆ ಎಂದು ಸಚಿವರು ಸಭೆಗೆ ಉತ್ತರಿಸಿದರು.