ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯ ಜೊತೆ ವಿಮಾನಯಾನ ಸಂಸ್ಥೆಗಳ ಚರ್ಚೆ: ಸಕಾರಾತ್ಮಕ ಸ್ಪಂದನೆ
Discussion between airlines and Belgaum Chamber of Commerce: Positive response
ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯ ಜೊತೆ ವಿಮಾನಯಾನ ಸಂಸ್ಥೆಗಳ ಚರ್ಚೆ: ಸಕಾರಾತ್ಮಕ ಸ್ಪಂದನೆ
ಬೆಳಗಾವಿ 05: ಬೆಳಗಾವಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ವಾಣಿಜ್ಯೋದ್ಯಮ ಸಂಘ ಪ್ರತಿಭಟನೆಯ ನಿರ್ಧಾರ ತಳೆದಿದ್ದ ಹಿನ್ನೆಲೆಯಲ್ಲಿ ವಿವಿಧ ಖಾಸಗಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಸಂಘದ ಕಚೇರಿಗೆ ಆಗಮಿಸಿ ಚರ್ಚೆ ನಡೆಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ನೀಡಿವೆ.
ಸಂಚಾರ ದಟ್ಟಣೆ ಇದ್ದರೂ ಬೆಳಗಾವಿ ವಿಮಾನ ನಿಲ್ದಾಣದಿಂದ ಸಂಚರಿಸುತ್ತಿದ್ದ ಹಲವಾರು ವಿಮಾನಗಳು ಏಕಾ ಏಕಿ ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಉದ್ಯಮಗಳ ಕಾರ್ಯಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದವು. ಜೊತೆಗೆ ಬೆಳಗಾವಿ ಅಭಿವೃದ್ಧಿಗೆ ಇದು ದೊಡ್ಡ ಹಿನ್ನಡೆಯನ್ನುಂಟು ಮಾಡುವ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ವಾಣಿಜ್ಯೋದ್ಯಮ ಸಂಘ ನಿರಂತರ ಸಭೆ ನಡೆಸಿ, ತಕ್ಷಣ ವಿವಿಧ ನಗರಗಳಿಗೆ ವಿಮಾನಯಾನ ಪುನಾರಂಭವಾಗದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ ಪ್ರತಿನಿಧಿಗಳು ಗುರುವಾರ ವಾಣಿಜ್ಯೋದ್ಯಮ ಸಂಘದ ಕಚೇರಿಗೆ ಆಗಮಿಸಿ ಚರ್ಚೆ ನಡೆಸಿದರು. ಬೆಳಗಾವಿ ವಿಮಾನ ನಿಲ್ದಾಣದ ಅಧಿಕಾರಿಗಳು ಸಹ ಆಗಮಿಸಿದ್ದರು. ಇದಕ್ಕೂ ಮೊದಲ ದಿನ, ಬುಧವಾರ ಸ್ಟಾರ್ ಏರ್ ವೇಸ್ ಪ್ರತಿನಿಧಿಗಳು ಸಹ ಆಗಮಿಸಿ ಅಹವಾಲು ಆಲಿಸಿದರು.
ಬೆಳಗಾವಿಯಿಂದ ಬೆಂಗಳೂರಿನ ಜೊತೆಗೆ, ಮುಂಬೈ, ಚೆನ್ನೈ, ಅಹಮದಾಬಾದ್, ಜೋಧಪುರ ನಗರಗಳಿಗೆ ತುರ್ತಾಗಿ ವಿಮಾನ ಸಂಚಾರ ಅಗತ್ಯವಾಗಿದೆ. ಜೊತೆಗೆ ವಾರಾಣಸಿ ಮತ್ತು ಕೊಚ್ಚಿ ನಗರಗಳಿಗೆ ಸಹ ಪ್ರಯಾಣಿಕರ ಸಂಖ್ಯೆ ದೊಡ್ಡದಿದೆ. ಬೆಳಗಾವಿ ರಫ್ತು ಉದ್ಯಮದಲ್ಲಿ ಬಹಳ ದೊಡ್ಡದಾಗಿ ಬೆಳೆದಿದೆ. ಜಿಎಸ್ ಟಿ ಕೊಡುಗೆ ಕೂಡ ಸಾಕಷ್ಟಿದೆ. ವಿಮಾನ ಸಂಪರ್ಕ ಬಂದ್ ಆದರೆ ಜಿಲ್ಲೆಯ ಮೇಲೆ ದೊಡಡ್ ಹೊಡೆತ ಬೀಳಲಿದೆ. ಹಾಗಾಗಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಕುರಿತು ಸುದೀರ್ಘವಾಗಿ ಚರ್ಚಿಸಿದ ಪ್ರತಿನಿಧಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮುಂಬೈ ವಿಮಾನವನ್ನು ಇಷ್ಟರಲ್ಲೇ ಆರಂಭಿಸಲಾಗುವುದು. ಇನ್ನಿತರ ನಗರಗಳಿಗೂ ಸೇವೆ ಆರಂಭಿಸುವ ಕುರಿತು ಮೇಲಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ನಗರಗಳಿಗೂ ದಿನಕ್ಕೆ ಒಂದೆರಡಾದರೂ ವಿಮಾನ ಸಂಚರಿಸುವಂತಾಗಬೇಕು ಎನ್ನುವ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಯಿತು.
ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಕಾರ್ಯದರ್ಶಿ ಸತೀಶ್ ಕುಲಕರ್ಣಿ, ಲಘು ಉದ್ಯೋಗ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷ ಸಚಿನ್ ಸಬ್ನಿಸ್, ವಾಣಿಜ್ಯೋದ್ಯಮ ಸಂಘದ ನಿರ್ದೇಶಕರಾದ ವಿಕ್ರಮ ಜೈನ್, ಉದಯ ಜೋಶಿ, ಎಂ.ಕೆ.ಹೆಗಡೆ, ಆನಂದ ದೇಸಾಯಿ, ಸಂದೀಪ ಬಾಗೇವಾಡಿ, ಸಂಜಯ ಪೋತದಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಇಂಡಿಗೋ ಸಂಸ್ಥೆಯ ಮನೋಜ್ ಪ್ರಭು, ವಿಮಾನ ನಿಲ್ದಾಣದ ಸೀನಿಯರ್ ಮ್ಯಾನೇಜರ್ ಮುಖುಲ್ ಶರ್ಮಾ, ಅಸಿಸ್ಟಂಟ್ ಮ್ಯಾನೇಜರ್ ಚೇತನ್, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯ ಜಯಸಿಂಗ್ ರಜಪೂತ, ಬೆಳಗಾವಿ ಡೆವಲಪ್ ಮೆಂಟ್ ಕೋರ್ ಗ್ರುಪ್ ಸದಸ್ಯ ಸತೀಶ್ ಕುಮಾರ ಮೊದಲಾದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 